ಉಲ್ಮ್(ಜರ್ಮನಿ) : ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಅಪಾರ ನಷ್ಟ ಅನುಭವಿಸಿದ್ದ ಜರ್ಮನಿಯ ಖ್ಯಾತ ಉದ್ಯಮಿ ಬಿಲಿಯನೇರ್ ಅಡಾಲ್ಫ್ ಮರ್ಕಲೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಬಂದ ಮೂಲಗಳು ತಿಳಿಸಿವೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ವಹಿವಾಟಿನಲ್ಲಿ ಅಪಾರ ನಷ್ಟ ಅನುಭವಿಸಿ ವಹಿವಾಟನ್ನು ಸುಸ್ಥಿತಿಗೆ ತರಲು ಅಸಾಧ್ಯವಾಗಿದ್ದರಿಂದ ಕಳೆದ ಕೆಲ ವಾರಗಳಿಂದ ಅನಿಶ್ಚಿತತೆಯನ್ನು ಎದುರಿಸಿ ಕೊನೆಗೆ ಆತ್ಮಹತ್ಯೆಗೆ ಮೊರೆಹೋಗಿದ್ದಾರೆ ಎಂದು ಕುಟುಂಬದವರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದಕ್ಷಿಣ ಜರ್ಮನಿಯ ಪಟ್ಟಣವಾದ ಉಲ್ಮ್‌ನಲ್ಲಿ 74 ವರ್ಷ ವಯಸ್ಸಿನ ಅಡಾಲ್ಫ್ ಮರ್ಕಲೆ ರೈಲು ಡಿಕ್ಕಿಯಿಂದ ಸಾವನ್ನಪ್ಪಿದ್ದು, ಕೊಲೆಗೆ ಕಾರಣವಾಗುವಂತಹ ಯಾವುದೇ ಸಾಕ್ಷಾಧಾರಗಳು ಲಭ್ಯವಾಗಿಲ್ಲ ಎಂದು ಸರಕಾರಿ ವಕೀಲರು ತಿಳಿಸಿದ್ದಾರೆ.
ಫೋರ್ಬ್ಸ್ ಪಟ್ಟಿಯ 2008ರಲ್ಲಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 94ನೇ ಸ್ಥಾನ ಪಡೆದಿದ್ದ ಅಡಾಲ್ಫ್ ಮರ್ಕಲೆ ಕುಟುಂಬ, ಅನೇಕ ಕಂಪೆನಿಗಳನ್ನು ನಿರ್ವಹಿಸುತ್ತಿತ್ತು. ಕಾರು ತಯಾರಿಕೆ ಕಂಪೆನಿಯಾದ ವಾಕ್ಸೊವಾಗೆನ್‌ನಲ್ಲಿ ಶೇರು ಹೂಡಿಕೆಯಿಂದಾಗಿ ಹೆಚ್ಚಿನ ನಷ್ಟ ಅನುಭವಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಮರ್ಕಲೆ ಕುಟುಂಬ, ಹೂಡಿಕೆಗಳಲ್ಲಿ ನೂರಾರು ಮಿಲಿಯನ್ ಯುರೋ ನಷ್ಟ ಅನುಭವಿಸಿದೆ. ವೊಕ್ಸ್‌ವಾಗೆನ್ ಶೇರುಗಳಲ್ಲಿಯೇ 539.4 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ. |