ವಿವಾದದಲ್ಲಿ ಸಿಲುಕಿದ ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯ 10,900 ಉದ್ಯೋಗಿಗಳು ಸಂಸ್ಥೆಯ ಮೇಲೆ ವಿಶ್ವಾಸವನ್ನು ಕಳೆದುಕೊಂಡಿದ್ದು, ಬಹುತೇಕ ಉದ್ಯೋಗಿಗಳು ಹೊಟ್ಟೆಪಾಡಿಗಾಗಿ ಕಳೆದ ಒಂದು ತಿಂಗಳಿನಿಂದ ಜಾಬ್ ಪೋರ್ಟಲ್‌ಗಳಿಗೆ ಲಗ್ಗೆ ಹಾಕಿದ್ದಾರೆ ಎಂದು ಸಮೀಕ್ಷಾ ಸಂಸ್ಥೆಯಾದ ಸಿಲಿಕಾನ್ ಇಂಡಿಯಾ ಮೂಲಗಳು ತಿಳಿಸಿವೆ. ಡಿಸೆಂಬರ್‌ನಲ್ಲಿ 7,258 ಉದ್ಯೋಗಿಗಳು ಜಾಬ್ ಪೋರ್ಟಲ್‌ಗಳಿಗೆ ತಮ್ಮ ಅನುಭವ ಪತ್ರಗಳನ್ನು ರವಾನಿಸಿದ್ದಾರೆ. ಆದರೆ ಸತ್ಯಂ ಅಡಳಿತ ಮಂಡಳಿಯ ನಿರ್ದೇಶಕರು ರಾಜೀನಾಮೆ ನೀಡಿದ ಒಂದು ವಾರದಲ್ಲೇ 4,714 ಉದ್ಯೋಗಿಗಳು ಜಾಬ್ ಪೋರ್ಟಲ್‌ಗಳಿಗೆ ಲಗ್ಗೆ ಹಾಕಿದ್ದು,ಕಳೆದ ಮೂರು ದಿನಗಳಲ್ಲಿಯೇ 1220 ಉದ್ಯೋಗಿಗಳು ಉದ್ಯೋಗಗಳಿಗಾಗಿ ಪ್ರಮುಖ ಜಾಬ್ ಪೋರ್ಟಲ್‌ಗಳ ಹುಡುಕಾಟ ನಡೆಸಿರುವುದು ಆಘಾತ ತಂದಿದೆ ಎಂದು ಪ್ರಕಟಿಸಿದೆ. ಸತ್ಯಂ ಕಂಪ್ಯೂಟರ್ಸ್‌ನ ಸ್ವತಂತ್ರ ನಿರ್ದೇಶಕರಾದ ಮೆಂಡು ರಾಮ್‌ಮೋಹನ್ ರಾವ್, ಮೆಂಗಲಂ ಶ್ರೀನಿವಾಸನ್,ವಿನೋಧ್. ಕೆ.ಧಾಮ್ ಮತ್ತು ಕೃಷ್ಣಾ ಜಿ.ಪಲೇಪು ರಾಜೀನಾಮೆ ನೀಡಿರುವುದಕ್ಕೆ ಸಾಕ್ಷಿಯಾಗಿದೆ. ಸತ್ಯಂ ಸಂಸ್ಥಾಪಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ರಾಮಲಿಂಗಾರಾಜು ರಾಜೀನಾಮೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತೆರಳಿದ್ದು, ಕಂಪೆನಿಯ ಅನೇಕ ಉದ್ಯೋಗಿಗಳು ಇತರ ಕಂಪೆನಿಗಳತ್ತ ಉದ್ಯೋಗಕ್ಕಾಗಿ ಅರಸುತ್ತಿದ್ದಾರೆ ಎಂದು ಸಿಲಿಕಾನ್ ಇಂಡಿಯಾ ತಿಳಿಸಿದೆ.ಸತ್ಯಂ ಉದ್ಯೋಗಿಗಳು ಈಗಾಗಲೇ ನೇಮಕಾತಿ ಸಂಸ್ಥೆಗಳ ಮೂಲಕ ಉದ್ಯೋಗದ ಹುಡುಕಾಟದಲ್ಲಿದ್ದು, ಉಪಾಧ್ಯಕ್ಷ ಹಿರಿ ಉಪಾಧ್ಯಕ್ಷ ಮಟ್ಟ ಅಥವಾ ಅದಕ್ಕಿಂತ ಮೇಲ್ಮಟ್ಟದ ಹುದ್ದೆಗಳಿಗೆ ಕಳೆದ ಕೆಲ ದಿನಗಳಿಂದ ಸತ್ಯಂ ಉದ್ಯೋಗಿಗಳಿಂದ ಕರೆಗಳು ಬರುತ್ತಿವೆ ಎಂದು ಬೆಂಗಳೂರು ಮೂಲದ ಹೆಡ್ ಹಂಟರ್ಸ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕ್ರಿಸ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ. |