ಸತ್ಯಂ ಮುಖ್ಯಸ್ಥ ಬಿ.ರಾಮಲಿಂಗಾರಾಜು 1.3 ಬಿಲಿಯನ್ ಡಾಲರ್ ವಂಚನೆ ಮಾಡಿರುವುದನ್ನು ಒಪ್ಪಿಕೊಂಡು ಕಾರ್ಪೋರೇಟ್ ಜಗತ್ತಿಗೆ ಅಘಾತವನ್ನು ನೀಡಿದ್ದು, ವಂಚನೆ ಆರೋಪ ಸಾಬೀತಾದಲ್ಲಿ ಸೆಕ್ಯೂರಿಟೀಸ್ ಕಾಂಟ್ರಾಕ್ಟ್ ರೆಗ್ಯೂಲೇಶನ್ ಕಾಯ್ದೆ 1956ರ ಸೆಕ್ಷನ್ 23ರ ಪ್ರಕಾರ 10 ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಸೆಕ್ಯೂರಿಟೀಸ್ ಕಾಂಟ್ರಾಕ್ಟ್ ರೆಗ್ಯೂಲೇಶನ್ ಕಾಯ್ದೆ 1956ರ ಸೆಕ್ಷನ್ 23ರ ಪ್ರಕಾರ ನಿರ್ದೇಶಕರು ವ್ಯವಸ್ಥಾಪಕ ಕಾರ್ಯನಿರ್ವಾಹಕ ಅಧಿಕಾರಿಗಳು ತ್ರೈಮಾಸಿಕ ಹಾಗೂ ವಾರ್ಷಿಕ ವರದಿಗಳನ್ನು ತಿರುಚಿದಲ್ಲಿ 10 ವರ್ಷಗಳ ಕಾರಾಗೃಹ ಹಾಗೂ 25 ಕೋಟಿ ರೂ. ದಂಡ ವಿಧಿಸಲಾಗುತ್ತದೆ.
ದೆಹಲಿ ಹೈಕೋರ್ಟ್‌ನ ಖ್ಯಾತ ನ್ಯಾಯಾವಾದಿ ಗೀತಾ ಲುತ್ರಾ ಸುದ್ದಿಗಾರರೊಂದಿಗೆ ಮಾತನಾಡಿ ಸತ್ಯಂ ಮುಖ್ಯಸ್ಥರ ವಿರುದ್ಧ ವಂಚನೆ, ಅಪರಾಧ ಷಡ್ಯಂತ್ರ, ಪರರ ಹಣ ದುರುಪಯೋಗಕ್ಕಾಗಿ ಏಳು ವರ್ಷಗಳ ಕಾರಾಗ್ರಹ ಶಿಕ್ಷೆಯನ್ನು ಅಮನುಭವಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸತ್ಯಂ ಬ್ಯಾಲೆನ್ಸ್ ಶೀಟ್‌ನಲ್ಲಿ ಕಳೆದ ಹಲವು ವರ್ಷಗಳಿಂದ ಆರ್ಥಿಕ ವಂಚನೆ ಮಾಡಿರುವುದಾಗಿ ಒಪ್ಪಿಕೊಂಡು ರಾಜೀನಾಮೆ ನೀಡುತ್ತಿರುವುದಾಗಿ ಹೈದ್ರಾಬಾದ್ ಮೂಲದ ಐಟಿ ಸಂಸ್ಥೆ ಮುಖ್ಯಸ್ಥ ರಾಮಲಿಂಗಾರಾಜು ಹೇಳಿಕೆ ನೀಡಿದ್ದಾರೆ.
ಸತ್ಯಂ ಮುಖ್ಯಸ್ಥ ತಪ್ಪನ್ನು ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ ಭಾರತದ ಸಂವಿಧಾನದ ಕಾನೂನಿನಡಿಯಲ್ಲಿ ಐಟಿ ಕಾಯ್ದೆ, ಸೆಬಿ ಕಾಯ್ದೆ ಮತ್ತು ವಿದೇಶಿ ವಿನಿಮಯ ಕಾಯ್ದೆಗಳ ವ್ಯಾಪ್ತಿಗೆ ಅನ್ವಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ನಕಲಿ ದಾಖಲೆ ಸೃಷ್ಟಿ ಮತ್ತು ಬ್ಯಾಂಕ್ ಖಾತೆಗಳನ್ನು ಮೋಸದಿಂದ ಬದಲಾಯಿಸುವ ಆರೋಪಗಳಿಗೆ ಬಿ.ರಾಮಲಿಂಗಾರಾಜು 2000ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣವನ್ನು ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್‌ನ ಖ್ಯಾತ ವಕೀಲರಾದ ಪವನ್ ದುಗ್ಗಾಲ್ ಹೇಳಿದ್ದಾರೆ. |