ಸತ್ಯಂ ಕಂಪ್ಯೂಟರ್ಸ್‌ನ ಕಾರ್ಪೋರೇಟ್ ಅವ್ಯವಹಾರ ಹಾಗೂ ಆರ್ಥಿಕ ವಂಚನೆ ಕುರಿತಂತೆ ಕೇಂದ್ರ ಸರಕಾರ ಹಾಗೂ ಆಂಧ್ರಪ್ರದೇಶ ಸರಕಾರಗಳು ಜಂಟಿಯಾಗಿ ತನಿಖೆ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.
ಜನೆವರಿ 14 ರೊಳಗೆ ಹೈದ್ರಾಬಾದ್ ರಿಜಿಸ್ಟರ್ ಆಫ್ ಕಂಪೆನೀಸ್ ಕಚೇರಿಯಿಂದ ಕಾರ್ಪೋರೇಟ್ ಸಚಿವಾಲಯಕ್ಕೆ ವರದಿಗಳು ಲಭ್ಯವಾಗಲಿದ್ದು, ಗಂಭೀರ ವಂಚನೆ ತನಿಖಾ ಕಚೇರಿಗೆ ಶಿಫಾರಸು ಮಾಡಲಾಗುವುದು ಎಂದು ಕೇಂದ್ರ ಸರಕಾರ ಹೇಳಿಕೆ ನೀಡಿದೆ.
ಪ್ರಧಾನಿಯವರು ಕರೆದಿರುವ ಮುಖ್ಯಮಂತ್ರಿಗಳ ಸಭೆಯಲ್ಲಿ ಪಾಲ್ಗೊಳ್ಳಲು ನವದೆಹಲಿಗೆ ಆಗಮಿಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ್ ರೆಡ್ಡಿಯವರು ಸುದ್ದಿಗಾರರೊಂದಿಗೆ ಮತನಾಡಿ, ಸತ್ಯಂ ಹಗರಣ ಕುರಿತಂತೆ ರಾಜ್ಯದ ತನಿಖಾ ಸಂಸ್ಥೆಗಳಾದ ಸಿಬಿ-ಸಿಐಡಿಗೆ ತನಿಖೆ ನಡೆಸುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಸತ್ಯಂ ಮುಖ್ಯಸ್ಥ ರಾಮಲಿಂಗಾರಾಜು ಹೇಳಿಕೆ ವಿವರಗಳು ಲಭ್ಯವಾಗಿದ್ದು, ಹೇಳಿಕೆಗಳನ್ನು ಪರಿಶೀಲಿಸಬೇಕಾಗಿದೆ. ಹೈದ್ರಾಬಾದ್‌ನಲ್ಲಿರುವ ರಿಜಿಸ್ಟಾರ್ ಆಫ್ ಕಂಪೆನೀಸ್ ಕಚೇರಿಗೆ ಜನೆವರಿ 14 ರೊಳಗಾಗಿ ಎಲ್ಲ ವಿವರಗಳನ್ನು ನೀಡುವಂತೆ ಆದೇಶಿಸಲಾಗಿದೆ ಎಂದು ಕಾರ್ಪೋರೇಟ್ ವ್ಯವಹಾರಗಳ ಸಚಿವ ಪಿ.ಸಿ.ಗುಪ್ತಾ ಹೇಳಿದ್ದಾರೆ.
ಸತ್ಯಾಂಶಗಳನ್ನು ಪರಿಶೀಲಿಸಿದ ನಂತರ ಸತ್ಯಂ ಹಗರಣವನ್ನು ಗಂಭೀರ ವಂಚನೆ ತನಿಖಾ ಕಚೇರಿಗೆ ವಹಿಸಲಾಗುವುದು. ಸತ್ಯಂ ಕಂಪೆನಿಯ ಕಾರ್ಯದರ್ಶಿಗಳು, ಲೆಕ್ಕಪರಿಶೋಧಕರು, ಆರ್ಥಿಕ ವಿಭಾಗದ ಅಧಿಕಾರಿಗಳು ತನಿಖಾ ವ್ಯಾಪ್ತಿಗೆ ಒಳಪಡಲಿದ್ದು, ತಪ್ಪಿತಸ್ಥರನ್ನು ನಿರ್ಧಾಕ್ಷಿಣ್ಯವಾಗಿ ಕಾನೂನಿನಡಿಯಲ್ಲಿ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ. |