ಮಾಜಿ ಮುಖ್ಯಸ್ಥ ಬಿ.ರಾಮಲಿಂಗಾರಾಜು ಮಾಡಿದ ಆರ್ಥಿಕ ವಂಚನೆ, ಕಂಪೆನಿಯ ಉದ್ಯೋಗಿಗಳ ಹಾಗೂ ಹೂಡಿಕೆದಾರರ ಮೇಲೆ ಪರಿಣಾಮ ಬೀರಬಾರದು ಎನ್ನುವ ದೃಷ್ಟಿಯಿಂದ ಸಹಜ ಸ್ಥಿತಿಯಲ್ಲಿ ಕಾರ್ಯನಿರ್ವಹಿಸುವ ಗುರಿಯನ್ನು ಸತ್ಯಂ ಹೊಂದಿದೆ ಎಂದು ಮಧ್ಯಂತರ ಸಿಇಒ ರಾಮ್ ಮೈನಾಮಪತಿ ಹೇಳಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಹಿವಾಟಿಗೆ ತೊಂದರೆಯಾಗದಂತೆ ಮುಂದುವರಿಯುವುದು ತಕ್ಷಣದ ಆದ್ಯತೆಯಾಗಿದ್ದು, ನಂತರ ವಂಚನೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿ ಮುಂದುವರಿಯಲಾಗುವುದು ಎಂದು ತಿಳಿಸಿದ್ದಾರೆ.ಮಾಜಿ ಮುಖ್ಯಸ್ಥ ರಾಮಲಿಂಗಾರಾಜು ಕೆಲ ಖಾಸಗಿ ಕಾರಣಗಳಿಂದಾಗಿ ಕಚೇರಿಗೆ ಬರುತ್ತಿಲ್ಲ. ಆದರೆ ನಮ್ಮ ಜೊತೆ ಸತತ ಸಂಪರ್ಕದಲ್ಲಿದ್ದ್ರಾರೆ.ಬಹುತೇಕ ಅವರು ಹೆದ್ರಾಬಾದ್‌ನಲ್ಲಿದ್ದಾರೆ ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈನಾಮಪತಿ ತಿಳಿಸಿದ್ದಾರೆ.ಸತ್ಯಂ ಸಂಸ್ಥೆಯ ಸಂಚಾಲಿತರಿಗೆ ನನಗೆ ಯಾವುದೇ ಸಂಬಂಧವಿಲ್ಲ. ಸತ್ಯಂ ಅಡಳಿತ ಮಂಡಳಿಯ ಇಬ್ಬರು ಸದಸ್ಯರು ನನ್ನನ್ನು ಬೆಂಬಲಿಸಿದ್ದರಿಂದ ಮಧ್ಯಂತರ ಸಿಇಒ ಸ್ಥಾನಕ್ಕೆ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.ಸತ್ಯಂ ಕಂಪೆನಿ ತನಿಖಾ ಸಂಸ್ಥೆಗಳೊಂದಿಗೆ ಸಹಕರಿಸಲು ಸಿದ್ದವಿದ್ದು, ರಾಮಲಿಂಗಾರಾಜು ನಡೆಸಿದ ವಂಚನೆ ಕುರಿತಂತೆ ಅಡಳಿತ ಮಂಡಳಿಯ ಸದಸ್ಯರಿಗೆ ಯಾವುದೇ ಮಾಹಿತಿಯಿಲ್ಲ. ಲೆಕ್ಕ ಪರಿಶೋಧಕರು ನೀಡಿದ ಆರ್ಥಿಕ ವಿವರಗಳ ಬಗ್ಗೆ ನಂಬಿಕೆಯಿದ್ದ ಕಾರಣ ಪರಿಶೀಲನೆ ಮಾಡಲು ಹೋಗಿಲ್ಲ ಎಂದು ವಿವರಣೆ ನೀಡಿದರು.ಮುಂದಿನ ದಿನಗಳಲ್ಲಿ ಸಂಪೂರ್ಣ ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಲಾಗುವುದು. ಸತ್ಯಂ ಕಂಪ್ಯೂಟರ್ಸ್ ಅಡಳಿತ ಮಂಡಳಿಗೆ ಏಳು ಮಂದಿ ನೂತನ ವ್ಯಕ್ತಿಗಳನ್ನು ನೇಮಕ ಮಾಡಲಾಗುವುದು. ಬಿಕ್ಕಟ್ಟಿನ ಸಂದರ್ಭದಲ್ಲಿ ಉದ್ಯೋಗಿಗಳು ಹಾಗೂ ಗ್ರಾಹಕರು ನಮಗೆ ನೀಡುತ್ತಿದ್ದ ಬೆಂಬಲವನ್ನು ಮುಂದುವರಿಸಿಕೊಂಡು ಹೋಗಲು ವಿನಂತಿಸಿದ ಅವರು ಪರಿಸ್ಥಿತಿ ತಿಳಿಯಾಗಲು ಸಮಯದ ಅಗತ್ಯವಿದೆ ಎಂದು ಸತ್ಯಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೈನಾಮಪತಿ ತಿಳಿಸಿದ್ದಾರೆ. |