ತೈಲ ವಿತರಣಾ ಸಂಸ್ಥೆಗಳ ಅಧಿಕಾರಿಗಳ ಅನಿರ್ದಿಷ್ಟಾವಧಿ ಮುಷ್ಕರದಿಂದಾಗಿ ದೇಶಾದ್ಯಂತ ಪೆಟ್ರೋಲ್ ಬಂಕ್‌ಗಳಲ್ಲಿ ತೈಲ ಕೊರತೆ ಕಂಡು ಬಂದಿದ್ದು, ಮುಷ್ಕರವು ಮೂರನೇ ದಿನಕ್ಕೆ ಕಾಲಿರಿಸತೊಡಗಿರುವಂತೆಯೇ ಜನ ಸಾಮಾನ್ಯರು ಇದರ ಪ್ರಭಾವಕ್ಕೆ ಈಡಾಗುತ್ತಿದ್ದಾರೆ.
ರಾಜಧಾನಿ ದೆಹಲಿಯೊಂದರಲ್ಲೇ ಇರುವ 425ರಷ್ಟು ಪೆಟ್ರೋಲ್ ಬಂಕ್‌ಗಳಲ್ಲಿ ಮೂರನೇ ಎರಡಂಶದಷ್ಟು ಬಂಕ್‌ಗಳು ಶುಕ್ರವಾರ ಬಾಗಿಲು ತೆರೆಯಲಿಲ್ಲ. ಇದಕ್ಕೆ ಕಾರಣ ತೈಲ ಅಭಾವ. ಅದೇ ರೀತಿ, ಮುಂಬಯಿಯಲ್ಲಿಯೂ ಶೇ.60ರಷ್ಟು ಪೆಟ್ರೋಲ್ ಪಂಪ್‌ಗಳು 'ಸ್ಟಾಕ್ ಇಲ್ಲ' ಬೋರ್ಡು ತಗುಲಿಸಿಕೊಂಡಿವೆ.
ಇಷ್ಟು ಮಾತ್ರವಲ್ಲ, ಸಂಕುಚಿತ ನೈಸರ್ಗಿಕ ಅನಿಲ (ಸಿಎನ್‌ಜಿ) ವಿತರಣೆಯಲ್ಲಿ ಕೂಡ ವ್ಯತ್ಯಯವಾಗಿದ್ದು, ಇದರಿಂದಾಗಿ ಮುಂಬಯಿಯಲ್ಲಿ ಸುಮಾರು ಎರಡು ಲಕ್ಷದಷ್ಟು ವಾಹನಗಳು ಕೊರತೆ ಅನುಭವಿಸುತ್ತಿವೆ. ಆದರೆ ದೆಹಲಿಯಲ್ಲಿ ಒಂದು ವಾರಗಳಿಗಾಗುವಷ್ಟು ಸಿಎನ್‌ಜಿ ಶೇಖರಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ದೇಶಾದ್ಯಂತ ಹಿಂದೂಸ್ತಾನ್ ಪೆಟ್ರೋಲಿಯಂ ಪಂಪುಗಳು ಅಷ್ಟೇನೂ ಬಾಧೆ ಅನುಭವಿಸಿಲ್ಲ. ಭಾರತ್ ಪೆಟ್ರೋಲಿಯಂ ಕಂಪನಿ ಅಧಿಕಾರಿಗಳು, ಸೂಕ್ತ ಪ್ರಮಾಣದಲ್ಲಿ ತೈಲ ಪೂರೈಕೆಯಾಗುವಂತೆ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ಆದರೆ, ದೇಶದ ಅತಿದೋಡ್ಡ ರೀಟೇಲರ್ ಆಗಿರುವ ಇಂಡಿಯನ್ ಆಯಿಲ್, ತೀವ್ರ ಬಾಧೆಗೀಡಾಗಿದೆ.
ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಅವರು ಗುರುವಾರ ನೋಯಿಡಾಕ್ಕೆ ತೆರಳಿ, ಮುಷ್ಕರ ನಿರತ ತೈಲ ವಲಯ ಅಧಿಕಾರಿಗಳ ಒಕ್ಕೂಟದ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಆದರೆ ಈ ಮಾತುಕತೆ ಮುರಿದು ಬಿದ್ದಿತ್ತು.
ನವೆಂಬರ್ ತಿಂಗಳಲ್ಲಿ ಅಂಗೀಕರಿಸಿರುವುದಕ್ಕಿಂತಲೂ ಹೆಚ್ಚು ವೇತನ ನೀಡಬೇಕು ಎಂಬ ಬೇಡಿಕೆಯೊಂದಿಗೆ ತೈಲ ಕ್ಷೇತ್ರದ ಈ ಅಧಿಕಾರಿಗಳು ಮುಷ್ಕರ ನಿರತರಾಗಿದ್ದಾರೆ. |