ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬಿಡುಗಡೆ ಮಾಡಿದ್ರೆ ಮಾತ್ರ ಮಾತು-ಕತೆ: ಟ್ರಕ್ ಮಾಲೀಕರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಡುಗಡೆ ಮಾಡಿದ್ರೆ ಮಾತ್ರ ಮಾತು-ಕತೆ: ಟ್ರಕ್ ಮಾಲೀಕರು
ಡೀಸೆಲ್ ಬೆಲೆಯನ್ನು ಲೀಟರಿಗೆ 3 ರೂ.ಗಳಷ್ಟು ಇಳಿಕೆ ಮಾಡುವುದಾಗಿ ಸರಕಾರವು ಶನಿವಾರ ಘೋಷಿಸಿದ್ದು, ಮಾತುಕತೆಗೆ ಬನ್ನಿ ಎಂಬ ಕೇಂದ್ರ ಸಾರಿಗೆ ಸಚಿವರ ಆಹ್ವಾನದ ಹೊರತಾಗಿಯೂ ಟ್ರಕ್ ಮಾಲೀಕರು ದೇಶಾದ್ಯಂತ ನಡೆಸುತ್ತಿರುವ ಮುಷ್ಕರ ಕೈಬಿಡದಿರಲು ತೀರ್ಮಾನಿಸಿದ್ದಾರೆ.

ಸೋಮವಾರದಿಂದ ಮುಷ್ಕರ ನಡೆಸುತ್ತಿರುವ ಟ್ರಕ್ ಮಾಲೀಕರ ಸಂಘದ ಬಂಧಿತ ಪದಾಧಿಕಾರಿಗಳನ್ನು ಬಿಡುಗಡೆ ಮಾಡಿದ ಬಳಿಕವೇ ಮಾತುಕತೆಗೆ ಬರುತ್ತೇವೆ ಎಂಬುದು ಟ್ರಕ್ ನಿರ್ವಾಹಕರ ಬಿಗಿಪಟ್ಟು.

ಸಾರಿಗೆ ವಾಹನ ಮಾಲೀಕರ ಪರಮೋಚ್ಚ ಸಂಘಟನೆ ಅಖಿಲ ಭಾರತ ಮೋಟಾರು ಸಾರಿಗೆ ಕಾಂಗ್ರೆಸ್ (ಎಐಎಂಟಿಸಿ)ಯ ಅಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಐವರು ಪದಾಧಿಕಾರಿಗಳನ್ನು ದೆಹಲಿಯಲ್ಲಿ ಶುಕ್ರವಾರ ಎಸ್ಮಾ ಕಾಯಿದೆಯಡಿ ಬಂಧಿಸಿದ ಬಳಿಕ ಈ ಹೇಳಿಕೆಗಳು ಹೊರಬಿದ್ದಿವೆ.

ಡೀಸೆಲ್ ಬೆಲೆ ಇಳಿಸುವ ಸರಕಾರದ ಘೋಷಣೆ ಬಗ್ಗೆ ಪ್ರತಿಕ್ರಿಯಿಸಲು ಎಐಎಂಟಿಸಿ ಪ್ರಧಾನ ಕಾರ್ಯದರ್ಶಿ ಎಸ್.ವೇಣುಗೋಪಾಲ್ ನಿರಾಕರಿಸಿದರು. ಯಾವುದೇ ಹೇಳಿಕೆ ನೀಡುವ ಅಥವಾ ಮಾತುಕತೆ ನಡೆಸುವ ಮೊದಲು ತಾನೂ ಸೇರಿದಂತೆ ಬಂಧಿತರನ್ನು ಬಿಡುಗಡೆಗೊಳಿಸಬೇಕು ಎಂದವರು ಹೇಳಿದ್ದಾರೆ.

ನಮ್ಮನ್ನು ಬೇಷರತ್ತಾಗಿ ಬಿಡುಗಡೆ ಮಾಡುವವರೆಗೂ ಸರಕಾರದ ನಿರ್ಣಯದ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಮತ್ತು ಮಾತುಕತೆಗೂ ಬರುವುದಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ಡೀಸೆಲ್ ಬೆಲೆಯನ್ನು ಲೀಟರಿಗೆ 10 ರೂ. ಇಳಿಸಬೇಕು ಮತ್ತು ಏರಿದ ಟೈರುಗಳ ಬೆಲೆಯನ್ನು ಶೇ.35ರಷ್ಟು ಇಳಿಸಬೇಕು, ರಾಜ್ಯಗಳೆಲ್ಲದರಲ್ಲೂ ಸಮಾನ ಮೌಲ್ಯಾಧಾರಿತ ತೆರಿಗೆ ಮುಂತಾದ ಬೇಡಿಕೆಗಳೊಂದಿಗೆ ಟ್ರಕ್ ಮಾಲೀಕರು ಕಳೆದ ಒಂದು ವಾರದಿಂದ ಮುಷ್ಕರ ನಡೆಸುತ್ತಿದ್ದಾರೆ. ದೇಶಾದ್ಯಂತ ಸುಮಾರು 60 ಲಕ್ಷ ಟ್ರಕ್ಕುಗಳು ರಸ್ತೆಗಿಳಿಯದೆ ನಾಗರಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಜೀವನಾವಶ್ಯಕ ವಸ್ತುಗಳ ಬೆಲೆಗಳು ಏರತೊಡಗಿವೆ.

ಇಷ್ಟು ದಿನಗಳಾದರೂ ಯಾವುದೇ ಪರಿಹಾರ ಗೋಚರಿಸದ ಹಿನ್ನೆಲೆಯಲ್ಲಿ ಸರಕಾರದ ಕಾರ್ಯಕ್ಷಮತೆಯ ಬಗ್ಗೆ ಪ್ರಜೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಅವರು ಮುಂಬಯಿಯಲ್ಲಿ ಹೇಳಿಕೆ ನೀಡಿ, ಪೆಟ್ರೋಲ್ ಬೆಲೆ 5 ರೂ., ಡೀಸೆಲ್ ಬೆಲೆ 3 ರೂ. ಹಾಗೂ ಅಡುಗೆ ಅನಿಲ ಬೆಲೆ ಸಿಲಿಂಡರಿಗೆ ಸುಮಾರು 20-25 ರೂ. ಇಳಿಸುವ ಉದ್ದೇಶ ಹೊಂದಿರುವುದಾಗಿ ಘೋಷಿಸಿದ್ದಾರೆ.

ಈ ಮಧ್ಯೆ, ಸಾರಿಗೆ ಸಚಿವ ಟಿ.ಆರ್.ಬಾಲು ಅವರು, ಮಾತುಕತೆಗೆ ಬನ್ನಿ, ಸಮಸ್ಯೆ ಪರಿಹರಿಸೋಣ ಎಂದು ಟ್ರಕ್ ಮಾಲೀಕರಿಗೆ ಆಹ್ವಾನ ನೀಡಿದ್ದಾರಲ್ಲದೆ, ಮುಷ್ಕರ ಕೊನೆಗೊಳಿಸದಿದ್ದರೆ ಟ್ರಕ್‌ಗಳ ಪರ್ಮಿಟ್ ರದ್ದುಗೊಳಿಸಲಾಗುವುದು ಎಂದೂ ಬೆದರಿಕೆಯೊಡ್ಡಿದ್ದಾರೆ.

ಸರಕಾರವು ಪ್ರತಿದಿನ ಈ ರೀತಿ ಮನವಿ ಮಾಡಿಕೊಳ್ಳುತ್ತಿದೆ. ಇಂದು ಕೂಡ ಅದೇ ಮನವಿ ಮಾಡುತ್ತಿದ್ದೇನೆ. ದಯವಿಟ್ಟು ಮಾತುಕತೆಗೆ ಬನ್ನಿ ಎಂದಿರುವ ಬಾಲು, ಟ್ರಕ್ ಮಾಲೀಕರ ಬೇಡಿಕೆ 'ಅಪ್ರಸ್ತುತ' ಎಂದಿದ್ದಾರಲ್ಲದೆ, ಪರ್ಮಿಟ್ ರದ್ದುಪಡಿಸುವ ಎಚ್ಚರಿಕೆ ನೀಡಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನದ ಬೆಲೆ ಕುಸಿತ
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬಡ್ಡಿ ದರ ಕಡಿತ
ನೇಪಾಳದಲ್ಲಿ ದಿನಕ್ಕೆ 16 ಗಂಟೆ ಪವರ್ ಕಟ್!
ಸತ್ಯಂ ಮಂಡಳಿಗೆ ಎಲ್ಐಸಿ, ಲಜಾರ್ಡ್?
ಸುದ್ದಿ ಚಾನೆಲ್‌ಗಳ ಲೋಕದಲ್ಲಿ ಹೊಸ ಅಧ್ಯಾಯ
ಅ-ಸತ್ಯಂ ಬ್ಯಾಂಕ್ ದಾಖಲೆಗಳು ನಾಪತ್ತೆ