ಮೆಟಾಸ್ ಇನ್ಫ್ರಾಸ್ಟ್ರಕ್ಚರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಕೆ ಮಾಧವ್ ವ್ಯಯಕ್ತಿಕ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾಸ್ ಕಂಪೆನಿ ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಮೆಟಾಸ್ ಇನ್ಫ್ರಾಸ್ಟ್ರಕ್ಚರ್ನ ಪಿ.ಕೆ.ಮಾಧವ್ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದು ವ್ಯಯಕ್ತಿಕ ಕಾರಣಗಳಿಂದಾಗಿ ನಿರ್ದೇಶಕ ಸ್ಥಾನ ಹಾಗೂ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ಮೆಟಾಸ್ ಕಂಪೆನಿ ಶೇರುಪೇಟೆಗೆ ಮಾಹಿತಿ ನೀಡಿದೆ.
ಸತ್ಯಂ ಸಂಸ್ಥಾಪಕರು, ಮಾಜಿ ಮುಖ್ಯಸ್ಥರಾಗಿದ್ದ ಬಿ. ರಾಮಲಿಂಗಾರಾಜು ಕುಟುಂಬ ಮೆಟಾಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿಯನ್ನು ಮುನ್ನಡೆಸುತ್ತಿದ್ದು, ಮೆಟಾಸ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಿದ್ದತೆ ನಡೆಸಿ ಹೂಡಿಕೆದಾರರ ಪ್ರಬಲ ವಿರೋಧದಿಂದಾಗಿ ನಂತರ ಕೈಬಿಟ್ಟಿದ್ದರಿಂದ ವಿವಾದವನ್ನು ಸೃಷ್ಟಿಸಿತ್ತು.
ಕಳೆದ ತಿಂಗಳು ಮೆಟಾಸ್ ಇನ್ಫ್ರಾಸ್ಟ್ರಕ್ಚರ್ನ ನಾನ್-ಎಕ್ಸಿಕ್ಯೂಟಿವ್ ನಿರ್ದೇಶಕ ಸ್ಥಾನಕ್ಕೆ ಹಾಗೂ ಅಧ್ಯಕ್ಷ ಹುದ್ದೆಗೆ ಆರ್.ಸಿ.ಸಿನ್ಹಾ ರಾಜೀನಾಮೆ ನೀಡಿರುವುದನ್ನು ಸ್ಮರಿಸಬಹುದು. |