ಸುನೀಲ್ ಮಿತ್ತಲ್ ಸಂಚಾಲಿತ ಭಾರ್ತಿ ಏರ್‌ಟೆಲ್ ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ ಮೂರನೇ ತ್ರೈಮಾಸಿಕದಲ್ಲಿ ಶೇ.38.34 ರಷ್ಟು ಏರಿಕೆ ಕಂಡು 1,976.41 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿದೆ. 2007-08 ರ ಆರ್ಥಿಕ ಸಾಲಿನ ಮೂರನೇ ತ್ರೈಮಾಸಿಕ ಅವಧಿಯಲ್ಲಿ 1,428.56 ಕೋಟಿ ರೂ.ಗಳ ನಿವ್ವಳ ಲಾಭಗಳಿಸಿತ್ತು ಎಂದು ಮುಂಬೈ ಶೇರುಪೇಟೆಗೆ ಮಾಹಿತಿ ನೀಡಿದೆ.ಕಳೆದ ವರ್ಷದ ಆರ್ಥಿಕ ಸಾಲಿನಲ್ಲಿ 6,950.14 ಕೋಟಿ ರೂಪಾಯಿಗಳ ಆದಾಯಗಳಿಸಿದ್ದ ಕಂಪೆನಿ, ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಶೇ.39.90 ರಷ್ಟು ಏರಿಕೆಯಾಗಿ 9,667.37 ಕೋಟಿ ರೂ.ಗಳಿಗೆ ತಲುಪಿದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ. ಭಾರ್ತಿ ಏರ್‌ಟೆಲ್ ಟೆಲಿಕಾಂ ಕ್ಷೇತ್ರದಲ್ಲಿ ಗಣನೀಯವಾಗಿ ಅಭಿವೃದ್ಧಿ ಹೊಂದುತ್ತಿದ್ದು ಗ್ರಾಮೀಣ ಭಾಗಗಳಿಗೆ ಕೂಡಾ ಸೇವೆಯನ್ನು ವಿಸ್ತರಿಸಿದ್ದರಿಂದ ವಹಿವಾಟಿನಲ್ಲಿ ಏರಿಕೆಯಾಗಿದೆ ಎಂದು ಕಂಪೆನಿಯ ಮುಖ್ಯಸ್ಥ ಸುನೀಲ್ ಭಾರ್ತಿ ಮಿತ್ತಲ್ ತಿಳಿಸಿದ್ದಾರೆ. |