ಜಾಗತಿಕ ಆರ್ಥಿಕ ಕುಸಿತವನ್ನು ಹಿಂದಕ್ಕೆ ತಳ್ಳಿ ಐಪೋಡ್, ಐಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪೆನಿ ಆಪಲ್, ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ 10 ಬಿಲಿಯನ್ ಡಾಲರ್ ದಾಖಲೆಯ ಆದಾಯ ಗಳಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಕಳೆದ 2007-08ರ ಆರ್ಥಿಕ ಸಾಲಿನ ಡಿಸೆಂಬರ್ ಅವಧಿಯಲ್ಲಿ 9.61 ಬಿಲಿಯನ್ ಡಾಲರ್ ಗಳಿಸಿದ್ದು,ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ 10.17 ಬಿಲಿಯನ್ ಡಾಲರ್ ಆದಾಯದಲ್ಲಿ ಏರಿಕೆಯಾಗಿದೆ ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. 2009 ರ ಪ್ರಥಮ ತ್ರೈಮಾಸಿಕದ ನಿವ್ವಳ ಲಾಭದಲ್ಲಿ ಶೇ.1.89ರಷ್ಟು ಏರಿಕೆಯಾಗಿ 1.61 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಕಳೆದ ವರ್ಷ 1.58 ಬಿಲಿಯನ್ ಡಾಲರ್‌ಗಳ ಲಾಭ ಗಳಿಸಿತ್ತು. ಆರ್ಥಿಕತೆಗೆ ಸವಾಲು ಎದುರಾಗಿರುವ ಸಂದರ್ಭದಲ್ಲಿ, 10 ಬಿಲಿಯನ್ ಡಾಲರ್ ತ್ರೈಮಾಸಿಕ ಆದಾಯ ಗಳಿಸಿ ಆಪಲ್ ಕಂಪೆನಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ದಾಖಲೆ ಸ್ಥಾಪಿಸಿರುವುದು ಸಂತಸ ತಂದಿದೆ ಎಂದು ಆಪಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಜಾಬ್ಸ್ ಹೇಳಿದ್ದಾರೆ. ತ್ರೈಮಾಸಿಕದ ಅವಧಿಯಲ್ಲಿ ಆಪಲ್ ಕಂಪೆನಿ, 22.72 ಮಿಲಿಯನ್ ಐಪೋಡ್‌ಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ.3 ರಷ್ಟು ಹೆಚ್ಚಳವಾಗಿದೆ.ಕಳೆದ ವರ್ಷದಲ್ಲಿ 4.36 ಮಿಲಿಯನ್ ಐಫೋನ್‌ಗಳನ್ನು ಮಾರಾಟ ಮಾಡಲಾಗಿದ್ದು, ಪ್ರಸಕ್ತ ವರ್ಷದಲ್ಲಿ ಶೇ.8.8 ರಷ್ಟು ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ಎರಡನೇ ತ್ರೈಮಾಸಿಕ ಅವಧಿಯಲ್ಲಿ 7.6 ಬಿಲಿಯನ್ ಡಾಲರ್‌ಗಳಿಂದ 8 ಬಿಲಿಯನ್ ಡಾಲರ್‌ಗಳವರೆಗೆ ಆದಾಯದ ಗುರಿಯನ್ನು ಹೊಂದಲಾಗಿದೆ ಎಂದು ಆಪಲ್ ಸಿಇಒ ಸ್ಟೀವ್ ಜಾಬ್ಸ್ ತಿಳಿಸಿದ್ದಾರೆ. |