ಬೀಜಿಂಗ್: ಅಶ್ಲೀಲ ಮತ್ತು ಲೈಂಗಿಕತೆ ಪ್ರಚೋದಿಸುತ್ತಿರುವ ವೆಬ್‌ಸೈಟುಗಳಿಗೆ ಕಡಿವಾಣ ಹಾಕುವ ಕಾರ್ಯಾಚರಣೆ ಮುಂದುವರಿಸಿರುವ ಚೀನಾ, ಒಟ್ಟು 1250 ವೆಬ್‌ಸೈಟುಗಳನ್ನು ಮುಚ್ಚಿಸಲಾಗಿದೆ ಎಂದು ಶುಕ್ರವಾರ ಘೋಷಿಸಿದೆ. ಜನವರಿ 5ರಂದು ಪ್ರಾರಂಭವಾಗಿದ್ದ ಈ ಆಂದೋಲನದಲ್ಲಿ ಈಗಾಗಲೇ 41 ಮಂದಿಯನ್ನು ಬಂಧಿಸಲಾಗಿದೆ ಎಂದು ಅದು ಹೇಳಿದೆ.
ನಾವು ಸೂಕ್ತ ಫಲಿತಾಂಶ ಪಡೆದುಕೊಂಡಿದ್ದೇವೆ ಎಂದು ಇಂಟರ್ನೆಟ್ ವ್ಯವಹಾರಗಳ ಮಂಡಳಿಯ ಉಪ ನಿರ್ದೇಶಕ ಲಿಯು ಜೆಂಗ್ರಾಂಗ್ ತಿಳಿಸಿದ್ದಾರೆ.
ಇಂಟರ್ನೆಟ್ ಅಶ್ಲೀಲತೆ ನಿಯಂತ್ರಣದ ಅಭಿಯಾನದ ಅಂಗವಾಗಿ ಚೀನಾದಲ್ಲಿ ಪೋರ್ನೋಗ್ರಫಿಯನ್ನು ನಿಷೇಧಿಸಲಾಗಿದೆ. ನಿಷೇಧವಿದ್ದರೂ, ಇಂಟರ್ನೆಟ್‌ನಲ್ಲಿ ಅಶ್ಲೀಲ ಸಾಹಿತ್ಯ, ಚಿತ್ರಗಳು ದೊರೆಯುತ್ತಿದ್ದವು. ಚೀನಾದ ಕೆಲವು ಪ್ರಮುಖ ವೆಬ್ ಪೋರ್ಟಲುಗಳು ಕೂಡ ಆಗಾಗ್ಗೇ ಅಶ್ಲೀಲವೆನಿಸುವ ಚಿತ್ರಗಳನ್ನು ಪ್ರಕಟಿಸುತ್ತಿದ್ದವು ಮತ್ತು ಅಶ್ಲೀಲ ವಿಷಯಗಳಿರುವ ವೆಬ್‌ಸೈಟುಗಳಿಗೆ ಲಿಂಕ್ ಕೊಡುತ್ತಿದ್ದವು.
ಇಂಟರ್ನೆಟ್ ಶುದ್ಧೀಕರಣ ಪ್ರಕ್ರಿಯೆಯನ್ನು, ಅಶ್ಲೀಲ ವಿಷಯಾಂಶಗಳುಳ್ಳ ಆನ್‌ಲೈನ್ ಗೇಮ್ಸ್‌ಗಳತ್ತವೂ ವಿಸ್ತರಿಸಲಾಗಿದೆ ಎಂದು ಸರಕಾರಿ ಸ್ವಾಮ್ಯದ ಕ್ಸಿನುವಾ ನ್ಯೂಸ್ ಏಜೆನ್ಸಿ ತಿಳಿಸಿದೆ. |