ಜಾಗತಿಕ ಆರ್ಥಿಕ ಮುಗ್ಗಟ್ಟು ಕ್ರೀಡಾ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಒಲಿಂಪಿಕ್ಸ್‌ನಲ್ಲಿ ಸ್ವರ್ಣ ವಿಜೇತ ಶೂಟರ್ ಅಭಿನವ್ ಬಿಂದ್ರಾ ನಡೆಸಲು ಉದ್ದೇಶಿಸಿರುವ ಕ್ರೀಡಾ ಯೋಜನೆಗೂ ಆರ್ಥಿಕ ಮುಗ್ಗಟ್ಟು ಎದುರಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಭಿನವ್ ಬಿಂದ್ರಾ, ಕ್ರೀಡಾ ಚಟುವಟಿಕೆಗಳಿಗೆ ಉತ್ತಮ ಪ್ರಾಯೋಜಕತ್ವ ದೊರೆಯುತ್ತಿಲ್ಲ. ಆದ್ದರಿಂದ ದೇಶಾದ್ಯಂತ ನಿರ್ಮಿಸಲು ಉದ್ದೇಶಿಸಿರುವ ಕ್ರೀಡಾ ಶಾಲಾ ಯೋಜನೆಯ ಕಾರ್ಯಕ್ರಮ ನಿಧಾಗತಿಯಲ್ಲಿ ಸಾಗುತ್ತಿದೆ ಎಂದು ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರವು ನಮ್ಮ ಯೋಜನೆಗೆ ಅರ್ಥಿಕ ನೆರವು ನೀಡಲು ಮುಂದೆ ಬಂದಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದರು.
ಇದೇ ವೇಳೆ ಒಲಿಂಪಿಕ್ಸ್ ಕುರಿತು ಮಾತನಾಡಿದ ಅವರು, 2008 ನನ್ನ ಪಾಲಿಗೆ ಯಶಸ್ಸಿನ ವರ್ಷ. ಆದರೆ ಸಾಧನೆಯ ಹಾದಿಯಲ್ಲಿ ಇನ್ನೂ ಬಹುದೂರ ಸಾಗಬೇಕಾಗಿದೆ. ಈ ಕುರಿತು ಉತ್ತಮ ರೀತಿಯಲ್ಲಿ ಅಭ್ಯಾಸ ನಡೆಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಕೇವಲ ಶೂಟಿಂಗ್‌ನಲ್ಲಿ ಮಾತ್ರವಲ್ಲ ಇತರ ಕ್ರೀಡೆಗಳಲ್ಲೂ ಕ್ರೀಡಾಳುಗಳು ಉತ್ತಮ ಸಾಧನೆ ಮಾಡಿದ್ದಾರೆ. ಭಾರತದ ಕ್ರೀಡಾ ಇತಿಹಾಸದಲ್ಲಿ ಕಳೆದ ವರ್ಷ ಸದಾ ನೆನಪಿನಲ್ಲಿ ಉಳಿಯುವಂಥದ್ದು ಎಂದು ಅವರು ಹೇಳಿದ್ದಾರೆ. |