ಕಾರ್ಪೋರೇಟ್ ವರ್ಲ್ಡ್ ಮತ್ತು ಅಂಡರ್ ವರ್ಲ್ಡ್ ನಡುವೆ ಇರುವ ಏಕರೂಪವೇನು? ಆರ್ಥಿಕ ಹಿಂಜರಿತದ ವೇಳೆ ಈ ಎರಡೂ 'ವರ್ಲ್ಡ್'ಗಳು ಮಾಡುವ ಕಾಸ್ಟ್ ಕಟ್ಟಿಂಗ್ ಯಾನೆ ವೆಚ್ಚಕಡಿತ! ಜಾಗತಿಕ ಆರ್ಥಿಕ ಸಮಸ್ಯೆಯು ದುಡ್ಡಿನ ಮಳೆ ಸುರಿಯುತ್ತದೆ ಎಂದು ನಂಬಲಾಗಿರುವ ಭೂಗತ ಜಗತ್ತಿಕೂ ಆರ್ಥಿಕ ಕುಸಿತದ ಬಿಸಿ ತಟ್ಟಿದೆ. ಅಲ್ಲೀಗ ಹೊಸ ನೇಮಕಾತಿ ನಡೆಯುತ್ತಿಲ್ಲ; ಬದಲಿಗೆ, ಅಲ್ಲಿ ನಡೆಯುವ ಸುಪಾರಿ ವ್ಯವಹಾರಗಳನ್ನೆಲ್ಲ ದರೋಡೆಕೋರರು ಮತ್ತು ಸಣ್ಣ ಪ್ರಮಾಣದ ಕ್ರಿಮಿನಲ್‌ಗಳಿಗೆ ಹೊರಗುತ್ತಿಗೆ ನೀಡಲಾಗುತ್ತಿದೆಯಂತೆ.
"ಭೂಗತ ದೊರೆಗಳು ತಮ್ಮ ತಂಡಗಳಿಗೆ ಹೆಚ್ಚಿನ ಸದಸ್ಯರನ್ನು ಸೇರಿಸುತ್ತಿಲ್ಲ. ಅವರು ಯಾವುದೇ ಗ್ಯಾಂಗ್‌ಗಳಿಗೆ ಸೇರದ ಸಣ್ಣಪುಟ್ಟ ಕ್ರಿಮಿನಲ್‌ಗಳಿಗೆ ಹೊರಗುತ್ತಿಗೆ ನೀಡುವ ಮೂಲಕ ತಮ್ಮ ಕಾರ್ಯ ಸಾಧಿಸಿಕೊಳ್ಳುತ್ತಾರೆ ಎಂದು ಕ್ರೈಂಬ್ರಾಂಚ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಅಚ್ಚರಿಯ ವಿಚಾರವು ಇತ್ತೀಚೆಗೆ ನಾಗಪಾಡಾದಲ್ಲಿ ಮೂರು ದರೋಡೆಕೋರರ ಬಂಧನದಿಂದ ಗೊತ್ತಾಗಿದೆ. ಈ ಬಂಧಿತ ಕದೀಮರ ತನಿಖೆಯ ವೇಳೆಗೆ, ಈ ಶಂಕಿತರು ಮೀರಾ ರಸ್ತೆಯ ಬಿಲ್ಡರ್ ಓರ್ವನಿಗೆ ಕಳೆದ ವರ್ಷ ಗುಂಡಿಕ್ಕಿರುವುದಾಗಿ ತನಿಖೆಯ ವೇಳೆಗೆ ಗೊತ್ತಾಗಿದೆ.
ಗ್ಯಾಂಗ್‌ಸ್ಟರ್ ಹೇಮಂತ್ ಪೂಜಾರಿ ಎಂಬಾತನಿಂದ 40 ಸಾವಿರ ಮುಂಗಡ ಪಡೆದು ಬಿಲ್ಡರ್‌ಗೆ ಗುಂಡೆಸೆದಿರುವುದಾಗಿ ಬಂಧಿತ ದರೋಡೆಕೋರರು ಹೇಳಿದ್ದಾರೆ. ಈತ ಬಿಲ್ಡರ್‌ನಿಂದ ಎರಡು ಕೋಟಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ.
ಬಂಧಿತರ ಚಿಕ್ಕಪ್ರಮಾಣದ ಕಳ್ಳರು. ಇವರ ವಿರುದ್ಧ ಸರ ಅಪಹರಣದ ಹನ್ನೊಂದು ಪ್ರಕರಣಗಳು ದಾಖಲಾಗಿವೆ. ಇವರ ತಂಡದ ನಾಯಕ ಪರ್ವೇಜ್ ಶೇಕ್ ಅಲಿಯಾಸ್ ಬೈಲಿಫ್ ಎಂಬಾತ 24ರ ಹರೆಯದವ. ಇತರ ಇಬ್ಬರೆಂದರೆ ಅಫ್ಜಲ್ ಯೂಸುಫ್ ಪಟೇಲ್ ಅಲಿಯಾಸ್ ಕಾಲೇಜ(23) ಮತ್ತು ನೌಶಾದ್ ಬೇಗ್(32). ಇವರು ದಕ್ಷಿಣ ಮತ್ತು ಕೇಂದ್ರೀಯ ಮುಂಬೈನಲ್ಲಿ ಕಾರ್ಯಾಚರಿಸುತ್ತಿದ್ದರು.
ಪೂಜಾರಿ ಪರ್ವೇಜ್‌ನ ಸಂಪರ್ಕ ಸಾಧಿಸಿ, ಸುಫಾರಿಯನ್ನು ಕಾರ್ಯಗತಗೊಳಿಸಲು ಐದು ಲಕ್ಷರೂಪಾಯಿ ಆಮಿಷ ಒಡ್ಡಿದ್ದ. ಅವರು ಈ ಕೆಲಸವನ್ನು ಆಯ್ದುಕೊಂಡ ಕಾರಣ ಅತ್ಯಲ್ಪ ಮೊತ್ತಕ್ಕೆ ಸುಫಾರಿ ಕೊಲೆಯನ್ನು ಒಪ್ಪಿಕೊಂಡಿದ್ದಾಗಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಚೋಟಾಶಕೀಲ್, ಚೋಟಾರಾಜನ್, ಹೇಮಂತ್ ಪೂಜಾರಿ ಮತ್ತು ರವಿಪೂಜಾರಿಯಂತವರು ಸಣ್ಣಮಟ್ಟದ ಕ್ರಿಮಿನಲ್‌ಗಳಿಗೆ ಗುತ್ತಿಗೆ ನೀಡಲು ಆರಂಭಿಸಿದ್ದಾರೆ ಎಂದು ಕ್ರೈಂ ಬ್ರಾಂಚ್ ಮುಖ್ಯಸ್ಥ ರಾಕೇಶ್ ಮಾರಿಯಾ ಹೇಳುತ್ತಾರೆ. ಇದಕ್ಕೆ ಕಾರಣ ಜಾಗತಿಕ ಆರ್ಥಿಕ ಕುಸಿತ ಮತ್ತು ಭೂಗತ ಜಗತ್ತಿನ ಮೇಲೆ ಇದರ ಪರಿಣಾಮ.
ಭೂಗತ ಜಗತ್ತು ಹಣದ ದ್ರವ್ಯತೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ಇದೀಗ ಕುಸಿತದಿಂದಾಗಿ ಹಣದ ಹರಿವಿನ ಪ್ರಮಾಣ ಕಡಿಮೆಯಾಗಿದೆ ಎಂಬುದಾಗಿ ಕ್ರೈಂ ಬ್ರಾಂಚಿನ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.
ಗುಪ್ತಚರ ಮಾಹಿತಿಗಳ ಪ್ರಕಾರ ಭೂಗತ ಲೋಕವೂ ಅಪಾರ ಪ್ರಮಾಣದ ಹಣವನ್ನು ರಿಯಲ್ ಎಸ್ಟೇಟ್ ಮತ್ತು ಶೇರು ಮಾರುಕಟ್ಟೆಗಳಲ್ಲಿ ತೊಡಗಿಸಿದ್ದು ಈ ಎರಡೂ ಮಾರುಕಟ್ಟೆಗಳು ಬಿದ್ದುಹೋಗಿವೆ. ಇದು ಭೂಗತ ಜಗತ್ತಿಗೆ ದೊಡ್ಡ ಹೊಡೆತ ನೀಡಿದೆ.
|