ಭಾರತದಲ್ಲಿ ಹಣಕಾಸು ಹಿನ್‌ಸರಿತ (ರಿಸೆಶನ್) ಇಲ್ಲ, ಕೇವಲ ಆರ್ಥಿಕ ವಿಳಂಬ (ಸ್ಲೋಡೌನ್) ಮಾತ್ರ ಉಂಟಾಗಿದೆ ಎಂದಿದ್ದಾರೆ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ. ಚೆನ್ನೈಯಲ್ಲಿ ಭಾರತೀಯ ಯುವಶಕ್ತಿ ಟ್ರಸ್ಟ್ ಉದ್ಘಾಟಿಸಿದ ಬಳಿಕ ಮಾತನಾಡುತ್ತಿದ್ದ ಅವರು, 'ದೇಶೀ ಬೇಡಿಕೆ ಹೆಚ್ಚಾಗುವಂತೆ ನೋಡಿಕೊಳ್ಳಲು ನಾವು ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಸರಕಾರವು ವಿತ್ತ ಸಂಬಂಧಿತ ಕ್ರಮಗಳನ್ನು ಕೈಗೊಳ್ಳುತ್ತಿದ್ದರೆ, ಆರ್‌ಬಿಐ ನೇರವಾಗಿ ಹಣಕಾಸಿಗೆ ಸಂಬಂಧಪಟ್ಟ ಕ್ರಮಗಳನ್ನು ಕೈಗೊಳ್ಳುತ್ತಿದೆ' ಎಂದು ಹೇಳಿದರು.ವಿದೇಶೀ ಮತ್ತು ಬ್ಯಾಂಕೇತರ ಸಾಲ ನೀಡಿಕೆಯಲ್ಲಿನ ಕೊರತೆಯಿಂದಾಗಿ ಒಂದಿಷ್ಟು 'ಹಣಕಾಸು ಆಘಾತ' ಆಗಿದೆ ಎಂದ ಚಿದಂಬರಂ, ಸಾಲಗಳ ಹೆಚ್ಚಿನ ಭಾಗವನ್ನು ಸಾರ್ವಜನಿಕ ವಲಯದ ಬ್ಯಾಂಕುಗಳೇ ನಿರ್ವಹಿಸುತ್ತಿವೆ ಎಂದರು.ದೇಶೀ ಬೇಡಿಕೆಯನ್ನು ಉತ್ತೇಜಿಸಲು ನಾವು ಸಾಲ ನೀಡಿಕೆಯನ್ನು ಹೆಚ್ಚಿಸಬೇಕಾಗಿದೆ ಎಂದ ಅವರು, ಇನ್ನಷ್ಟು ಉತ್ತೇಜನಾ ಪ್ಯಾಕೇಜ್‌ಗಳ ನಿಟ್ಟಿನಲ್ಲಿ ಸರಕಾರ ಮತ್ತು ಆರ್‌ಬಿಐ ಜತೆಯಾಗಿ ಕೆಲಸ ಮಾಡಲಿದೆ ಎಂದರು. |