ಸತ್ಯಂ ಹಗರಣದ ಆರೋಪಿ ರಾಮಲಿಂಗ ರಾಜು ಕಂಪೆನಿಯಲ್ಲಿ ಸುಮಾರು 13,000 ಖೊಟ್ಟಿ ನೌಕರರನ್ನು ಸೃಷ್ಟಿಸಿರುವುದಾಗಿ ಆಂಧ್ರಪ್ರದೇಶದ ಅಪರಾಧ ಪತ್ತೆ ದಳ(ಸಿಐಡಿ) ತನಿಖೆ ನಡೆಸಿ ಹೇಳಿರುವ ಹಿನ್ನೆಲೆಯಲ್ಲಿ ಸತ್ಯಂ ಕಂಪ್ಯೂಟರ್ಸ್ ಸರ್ವೀಸಸ್‌ನ ಮಾನವ ಸಂಪನ್ಮೂಲ ಇಲಾಖೆಯು ಈ ಕುರಿತಂತೆ ಪರಿಶೀಲನೆ ಆರಂಭಿಸಿದೆ.
"ಸತ್ಯಂ ಕಂಪ್ಯೂಟರ್ಸ್‌ನ ಮಾನವ ಸಂಪನ್ಮೂಲ ವಿಭಾಗವು ನೌಕರರ ದಾಖಲಾತಿ ವಿವರಗಳನ್ನು ಪರಿಶೀಲಿಸುತ್ತಿರುವುದಾಗಿ" ಕಂಪೆನಿಯ ವಕ್ತಾರ ಶನಿವಾರ ತಿಳಿಸಿದರು. ಸತ್ಯಂನಲ್ಲಿ 53 ಸಾವಿರ ಉದ್ಯೋಗಿಗಳಿದ್ದು, ಅವರೆಲ್ಲರ ದಾಖಲಾತಿ ವಿವರಗಳನ್ನು ತಪಾಸಣೆಗೊಳಪಡಿಸುತ್ತಿರುವುದಾಗಿ ಅವರು ಹೇಳಿದರು.
ಸತ್ಯಂ ಆರೋಪಿ ರಾಜು ಸುಮಾರು 12 ಸಾವಿರ ನಕಲಿ ಉದ್ಯೋಗಿಗಳ ಖಾತೆಗಳನ್ನು ಸೃಷ್ಟಿಸಿ ಪ್ರತಿ ತಿಂಗಳು 20 ಕೋಟಿ ರೂ. ತಮ್ಮ ಖಾತೆಗೆ ಜಮಾ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದರು ಎಂದು ಆಂಧ್ರಪ್ರದೇಶದ ಅಪರಾಧ ಪತ್ತೆ ದಳದ ಅಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಆರೋಪಿಸಿದ್ದರು. ಆದರೆ ರಾಮಲಿಂಗ ರಾಜು ಪರ ವಕೀಲ ಭರತ್ ಕುಮಾರ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.
|