ಜಾಗತಿಕ ಆರ್ಥಿಕ ಹಿಂಜರಿತವು ಐಟಿ ವಲಯವನ್ನು ಮಾರಕವಾಗಿ ಬಾಧಿಸಿದೆ. ಇದರಿಂದಾಗಿ ತಂತ್ರಜ್ಞಾನ ವಲಯದಲ್ಲಿ ದುಡಿಯುವ ಅಸಂಖ್ಯಾತ ನೌಕರರ ಉದ್ಯೋಗ ನಷ್ಟ ಹೊಂದಿತ್ತು. ಆದರೂ ಇದೀಗ ಕೆಲಸದಲ್ಲಿ ಮುಂದುವರಿಯುತ್ತಿರುವ ನೌಕರರ ವೇತನದಲ್ಲಿ ಕಡಿತವುಂಟಾಗಲಿಲ್ಲ. ಅಧಿಕ ಕೆಲಸ ಒತ್ತಡ ಮತ್ತು ಹೆಚ್ಚು ಹೊತ್ತು ಕೆಲಸದಲ್ಲಿ ತೊಡಗಬೇಕಾಗಿರುವುದು ಅವಶ್ಯವಾದರೂ ವೇತನ ಶ್ರೇಣಿಯ ವರದಿಯ ಪ್ರಕಾರ ಐಟಿ ಕ್ಷೇತ್ರದಲ್ಲಿ ಸಾನ್ ಫ್ರಾನ್ಸಿಸ್ಕೊ ಮತ್ತು ಲಂಡನ್ನಲ್ಲಿ ಅತೀ ಹೆಚ್ಚಿನ ವೇತನ ನೀಡಲಾಗುತ್ತದೆ.
ಈ ಕುರಿತು ಬಿಸಿನೆಸ್ ವೀಕ್ ಡಾಟ್ ಕಾಂ ನಡೆಸಿದ ವೇತನ ಶ್ರೇಣಿ ಸಮೀಕ್ಷೆಯಲ್ಲಿ, ಸಾಫ್ಟ್ವೇರ್ ಡೆವೆಲಪರ್ ಮತ್ತು ಐಟಿ ಪ್ರಾಜೆಕ್ಟ್ ಮ್ಯಾನೇಜರ್ ಸೇರಿದಂತೆ, ತಂತ್ರಜ್ಞಾನ ಕ್ಷೇತ್ರದ ಹತ್ತು ವಿವಿಧ ಹುದ್ದೆಗಳಲ್ಲಿ ಪ್ರತಿಯೊಂದರ ಸರಾಸರಿ ವೇತನದಲ್ಲಿ, ಸಾನ್ ಫ್ರಾನ್ಸಿಸ್ಕೋ ಅಗ್ರಸ್ಥಾನಿಯಾಗಿ ಕಂಡುಬಂದಿದೆ.
ಕಂಪ್ಯೂಟರ್ ಕ್ಷೇತ್ರದ ಬೃಹತ್ ಕಂಪೆನಿ ಗೂಗಲ್ ಮತ್ತು ಕಂಪ್ಯೂಟರ್ ಉತ್ಪಾದಕ ಕಂಪೆನಿಗಳಾದ ಆಪಲ್ ಇರುವ ಬೇ ಏರಿಯಾದಲ್ಲಿ, ಸಾಫ್ಟ್ವೇರ್ ಡೆವೆಲಪ್ಮೆಂಟ್ ಮ್ಯಾನೇಜರ್ ಶ್ರೇಣಿಯ ಉದ್ಯೋಗಿಗಳು ಅತ್ಯಧಿಕವಾಗಿ, ವಾರ್ಷಿಕ 136 ಸಾವಿರ ಡಾಲರ್ ವೇತನ ಪಡೆಯುತ್ತಾರೆ. ಸಾನ್ ಫ್ರಾನ್ಸಿಸ್ಕೊದಲ್ಲಿ ಅತ್ಯಂತ ಕಡಿಮೆ ವೇತನವಿರುವುದು ಹೆಲ್ಪ್ ಡೆಸ್ಕ್ ತಜ್ಞರಿಗೆ. ಅವರು 53,300 ಡಾಲರ್ ವೇತನ ಪಡೆಯುವುದಾಗಿ ಸಮೀಕ್ಷೆ ತಿಳಿಸಿದೆ.
ಸಿಲಿಕಾನ್ ವ್ಯಾಲಿಯ ಹೊರಗೆ, ಸ್ಥಳೀಯ ಬೇಡಿಕೆಗೆ ತಕ್ಕಂತೆ ವೇತನದ ಪ್ರವೃತ್ತಿಯೂ ಕಂಡುಬಂದಿದೆ. ಮೈಕ್ರೋಸಾಫ್ಟ್ ಮತ್ತು ಅಮೆಜಾನ್ ಡಾಟ್ ಕಾಂನಂತಹ ದಿಗ್ಗಜ ಸಂಸ್ಥೆಗಳಿರುವ ಸಿಯಾಟ್ಲ್ನಲ್ಲಿ, ಸಾಫ್ಟ್ವೇರ್ ಡೆವಲಪರ್ಗಳು ಸರಾಸರಿ 88,400 ಡಾಲರ್ ವಾರ್ಷಿಕ ವೇತನ ಪಡೆಯುತ್ತಾರೆ.
|