ಮೈಕ್ರೋಸಾಫ್ಟ್ ತನ್ನ ಐದು ಸಾವಿರ ಉದ್ಯೋಗಿಗಳಿಗೆ ಪಿಂಕ್‌ಸ್ಲಿಪ್ ನೀಡಲು ಮುಂದಾಗಿರುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ, ಭಾರತಿಯರೂ ಸೇರಿದಂತೆ ವಿಸಾ ಆಧಾರದಲ್ಲಿ ಕೆಲಸ ಮಾಡುತ್ತಿರುವ ವಿದೇಶಿ ಉದ್ಯೋಗಿಗಳನ್ನು ಮೊದಲು ಕಿತ್ತು ಹಾಕಿ ಎಂಬುದಾಗಿ ರಿಪಬ್ಲಿಕನ್ ಪಕ್ಷದ ಪ್ರಭಾವಿ ಸೆನೆಟರ್ ಒಬ್ಬರು ಸಾಫ್ಟ್‌ವೇರ್ ದೈತ್ಯ ಸಂಸ್ಥೆಗೆ ಸಲಹೆ ನೀಡಿದ್ದಾರೆ.
ಮುಂದಿನ 18 ತಿಂಗಳೊಳಗಾಗಿ ಐದು ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದಾಗಿ ಇತ್ತೀಚೆಗೆ ಘೋಷಿಸಿರುವ ಸಂಸ್ಥೆಗೆ ಪತ್ರ ಬರೆದಿರುವ ಲೋವಾ ಸೆನೆಟರ್ ಚಕ್ ಗ್ರಾಸ್‌ಲ್ಲೆ, ಇದು ಎಚ್-1ಬಿ ಅಥವಾ ಎಲ್ ವೀಸಾ ಆಧಾರದಲ್ಲಿ ಗೊತ್ತು ಮಾಡಿರುವ ವಿದೇಶಿ ಸಿಬ್ಬಂದಿಗಳ ಮೇಲೆ ಪರಿಣಾಮ ಬೀರದು ಬದಲಿಗೆ, ಅಮೆರಿಕ ಸಿಬ್ಬಂದಿಗಳು ಉದ್ಯೋಗ ಕಳೆದುಕೊಳ್ಳಬೇಕಾದೀತು ಎಂಬುದಾಗಿ ಕಳವಳ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಕಡಿತದ ವೇಳೆ ಸಂಸ್ಥೆಗಳು ಅಮೆರಿಕ ಉದ್ಯೋಗಿಗಳ ಬದಲಿಗೆ ಎಚ್-1ಬಿ ಅಥವಾ ಇತರ ವೀಸಾ ಉದ್ಯೋಗಿಗಳನ್ನು ಉಳಿಸಿಕೊಳ್ಳಬಾರದು ಎಂಬುದಾಗಿ ಮೈಕ್ರೋಸಾಫ್ಟ್ ಮುಖ್ಯಕಾರ್ಯನಿರ್ವಾಹಕ ಸ್ಟೀವ್ ಬಲ್ಲಮರ್ ಅವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ಮೈಕ್ರೋಸಾಫ್ಟ್ ವರ್ಷವೊಂದರ ಎಚ್-1ಬಿ ವೀಸಾದ ಮುಖಾಂತರ ಸುಮಾರು 60 ಸಾವಿರ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳುತ್ತಿದ್ದು, ಇವರಲ್ಲಿ ಹೆಚ್ಚಿನವರು ಭಾರತ ದೇಶದ ಉದ್ಯೋಗಿಗಳು.
ಅಮೆರಿಕವು ಆರ್ಥಿಕ ಹಿನ್ಸರಿತವನ್ನು ಅನುಭವಿಸುತ್ತಿರುವ ಈ ಸಂದರ್ಭದಲ್ಲಿ ರಾಷ್ಟ್ರದ ಉದ್ಯೋಗಿಗಳಿಗೆ ಆದ್ಯತೆ ನೀಡುವ ಮೂಲಕ ಅವರನ್ನು ಉಳಿಸಿಕೊಳ್ಳಲು ಮೈಕ್ರೋಸಾಫ್ಟ್ ನೈತಿಕವಾಗಿ ಬಾಧ್ಯವಾಗಿದೆ ಎಂದು ಅವರು ಒತ್ತಾಯಿಸಿದರು. |