ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಬೆಲೆ ಕುಸಿತದ ಕಾರಣ ಸರ್ಕಾರ ಭಾರಿ ಪ್ರಮಾಣದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಇಳಿಸಬಹುದು ಎಂಬ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇದ್ದು, ಪೆಟ್ರೋಲ್ಗೆ ಲೀಟರ್ಗೆ 5ರೂ. ಮತ್ತು ಡಿಸೇಲ್ಗೆ 1ರೂ. ಮಾತ್ರ ಕಡಿತ ಮಾಡುವ ಸಾಧ್ಯತೆ ಇದೆ.
ಸರ್ಕಾರವು ಕುಸಿದ ತೈಲದ ಬೆಲೆಯ ಲಾಭ ಪಡೆದುಕೊಂಡು ಅಧಿಕ ತೆರಿಗೆ ಸಂಗ್ರಹದ ಮೂಲಕ ತನ್ನ ಖಜಾನೆ ಭರ್ತಿ ಮಾಡಿಕೊಳ್ಳಲು ಚಿಂತನೆ ನಡೆಸಿರುವುದಾಗಿ ವಿರೋಧ ಪಕ್ಷಗಳು ಟೀಕಾ ಪ್ರಹಾರ ನಡೆಸಿವೆ.
ಪೆಟ್ರೋಲಿಯಂ ಸಚಿವ ಮುರಳಿ ದೇವ್ರಾ ಅವರು, ಡಿಸೆಂಬರ್ ಕೊನೆಯ ವಾರದಿಂದಲೇ ಪೆಟ್ರೋಲ್, ಡಿಸೇಲ್ ಮತ್ತು ಅಡುಗೆ ಅನಿಲದ ಬೆಲೆ ಇಳಿಕೆಯ ಬಗ್ಗೆ ಮಾತನಾಡುತ್ತಿದ್ದರೂ ಅದನ್ನು ಔಪಚಾರಿಕವಾಗಿ ಪ್ರಕಟಿಸುವುದಕ್ಕೆ ಇದುವರೆಗೂ ದಿನ ನಿಗದಿಪಡಿಸಿಲ್ಲ.
ಜಾಗತಿಕ ತೈಲ ಬೆಲೆ ಕುಸಿತದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಿಂದ ಅಧಿಕ ಲಾಭ ಬರತೊಡಗಿದೆ. ಆದರೆ ಚಿಲ್ಲರೆ ಮಾರಾಟದ ದರ ಇಳಿಕೆಯು ಈ ತೈಲ ಇಳಿಕೆಯನ್ನು ಪ್ರತಿನಿಧಿಸುವುದಿಲ್ಲ. ಯಾಕೆಂದರೆ ಈ ಎರಡು ತೈಲಗಳ ಮೇಲೆ ಅಬಕಾರಿ ಮತ್ತು ಕಸ್ಟಮ್ಸ್ ತೆರಿಗೆ ಹೆಚ್ಚಿಸುವ ಮೂಲಕ ಲಾಭ ಮಾಡಿಕೊಳ್ಳಲು ಸರ್ಕಾರ ಬಯಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |