ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರ ಅನುಪಸ್ಥಿತಿಯಿಂದಾಗಿ, ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಫೆಬ್ರವರಿ 16 ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ ಎಂದು ಪ್ರದಾನಿ ಕಚೇರಿಯ ಮೂಲಗಳು ತಿಳಿಸಿವೆ. ಒಂದು ವೇಳೆ ವೈದ್ಯರು ಅನುಮತಿ ನೀಡಿದಲ್ಲಿ 14ನೇ ಲೋಕಸಭಾ ಅವಧಿಯ ಕೊನೆಯ ದಿನವಾದ ಫೆಬ್ರವರಿ 26 ರಂದು ಪ್ರಧಾನಿ ಸಂಸತ್ ಅಧೀವೇಶನಕ್ಕೆ ಆಗಮಿಸಿ ಕೆಲ ಮಾತುಗಳನ್ನಾಡಲಿದ್ದಾರೆ. ಆದರೆ ಫೆಬ್ರವರಿ 12 ರಂದು ಆರಂಭವಾಗುವ ಅಧೀವೇಶನದಲ್ಲಿ ಪ್ರಧಾನಿ ಪಾಲ್ಗೊಳ್ಳುವುದು ಸಾಧ್ಯವಿಲ್ಲ ಎಂದು ಪ್ರಧಾನಿಯವರ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭದ್ರತಾ ಕಾರಣಗಳಿಂದಾಗಿ ತುರ್ತು ನಿಗಾ ಘಟಕದಿಂದ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ಮನಮೋಹನ್ ಸಿಂಗ್ ಆದಷ್ಟು ಶೀಘ್ರದಲ್ಲಿ ಕಾರ್ಯನಿರ್ವಹಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದು, ಆದರೆ ಅತ್ಯಗತ್ಯ ಸಂದರ್ಭವಿರದಿದ್ದಲ್ಲಿ ಪ್ರದಾನಿಯವರ ವಿಶ್ರಾಂತಿಗೆ ಅಡ್ಡಿ ಪಡಿಸದಿರಲು ಪ್ರಧಾನ ಮಂತ್ರಿಯವರ ಕಚೇರಿಯ ಮೂಲಗಳು ನಿರ್ಧರಿಸಿವೆ ಎಂದು ಯುಪಿಎ ಹಿರಿಯ ಸಚಿವರು ತಿಳಿಸಿದ್ದಾರೆ. |