ಜಾಗತಿಕ ಆರ್ಥಿಕ ಕುಸಿತದಲ್ಲಿ ಬಳಲುತ್ತಿರುವ ಹಿನ್ನೆಲೆಯಲ್ಲಿ ಪುನಶ್ಚೇತನ ನೀಡಲು ಅಮೆರಿಕ ಸಂಸತ್ತು 819 ಬಿಲಿಯನ್ ಡಾಲರ್‌ಗಳ ಉತ್ತೇಜನ ಪ್ಯಾಕೇಜ್ ಮಸೂದೆಗೆ ಅಂಗೀಕಾರ ನೀಡಿದೆ ಎಂದು ಸಂಸದೀಯ ಮೂಲಗಳು ತಿಳಿಸಿವೆ.
ಅಮೆರಿಕದ ಸಂಸತ್ತಿನಲ್ಲಿ ಪ್ಯಾಕೇಜ್ ವಿಧೇಯಕವನ್ನು ಮಂಡಿಸಲಾಗಿದ್ದು 244-188 ಮತಗಳ ಅಂತರದಿಂದ ಮಸೂದೆಯನ್ನು ಅಂಗೀಕರಿಸಲಾಯಿತು. ವಿರೋಧ ಪಕ್ಷವಾದ ರಿಪಬ್ಲಿಕನ್ ಸಂಸದರಿಂದ ಒಂದು ಮತವನ್ನು ಕೂಡಾ ಪಡೆಯಲು ವಿಫಲವಾಗಿರುವುದು ಬರಾಕ್ ಒಬಾಮಾ ಆರ್ಥಿಕ ನೀತಿಗೆ ಹಿನ್ನೆಡೆಯಾದಂತಾಗಿದೆ ಎಂದು ಸಂಸತ್ತಿನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಮಂಗಳವಾರದಂದು ವಿರೋಧ ಪಕ್ಷದ ಮುಖಂಡರೊಂದಿಗೆ ಕೆಲ ಕಾಲ ಚರ್ಚಿಸಿ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಹೊರತರಲು ಪ್ಯಾಕೇಜ್ ಬಿಡುಗಡೆಗೆ ಸಹಕರಿಸಬೇಕು ಎಂದು ವ್ಯಯಕ್ತಿಕ ಮನವಿ ಮಾಡಿದ್ದರು.
ಅಮೆರಿಕನ್ ರಿಕವರಿ ಆಂಡ್ ರಿಇನ್‌ವೆಸ್ಟ್‌ಮೆಂಟ್ ಆಕ್ಟ್ ಕಾಯ್ದೆಯನ್ನು 11 ಡೆಮಾಕ್ರೆಟಿಕ್ ಸದಸ್ಯರು ವಿರೋಧಿಸಿ ಮತ ಚಲಾಯಿಸಿದರು.ಮಸೂದೆ ಮುಂದಿನ ಹಂತವಾಗಿ ಸೆನೆಟ್‌ನಲ್ಲಿ ಮಂಡಿಸಲಾಗಿದ್ದು, ನಂತರ ಅಧ್ಯಕ್ಷ ಒಬಾಮಾ ಹಸ್ತಾಕ್ಷರ ಹಾಕಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕ ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ವೇಗವಾಗ ಸದೃಢವಾಗಿ ಮುನ್ನಡೆಯುವುದು ಅಗತ್ಯವಾಗಿದ್ದರಿಂದ ಉತ್ತೇಜನ ಪ್ಯಾಕೇಜ್ ಬಿಡುಗಡೆಗೆ ನಿರ್ಧರಿಸಲಾಗಿದೆ ಎಂದು ಅಧ್ಯಕ್ಷ ಒಬಾಮಾ ತಿಳಿಸಿದ್ದಾರೆ. |