ಕಂಪ್ಯೂಟರ್ ಕೊಳ್ಳಲು ಕಾಯುತ್ತಿದ್ದೀರಾ? ಆರು ತಿಂಗಳು ಕಾಯಿರಿ. ಕೇವಲ 500 ರೂಪಾಯಿ ಆಸುಪಾಸಿಗೆ ಕಂಪ್ಯೂಟರುಗಳು ಲಭ್ಯವಾಗಲಿವೆ! ಅಚ್ಚರಿಯಾಗುತ್ತದೆಯೇ? ಹೌದು. ನವಜ್ಞಾನ-ವಿಜ್ಞಾನವನ್ನು ಪ್ರತಿಯೊಂದು ಮನೆಗೂ ತಲುಪಿಸುವ ಉದ್ದೇಶದಿಂದ ಸರಕಾರವು ಈ ಕ್ರಮಕ್ಕೆ ಮುಂದಾಗಿದ್ದು, ಆರು ತಿಂಗಳೊಳಗೆ ಈ ಅಗ್ಗದ ಕಂಪ್ಯೂಟರ್ ಮಾರುಕಟ್ಟೆಯಲ್ಲಿ ದೊರೆಯಲಿದೆ.
ಬೆಂಗಳೂರಿನ ಐಐಎಸ್‌ಸಿ ಮತ್ತು ಮದ್ರಾಸ್ ಐಐಟಿ ಸೇರಿಕೊಂಡು ಈ ಪುಟ್ಟ ತಂತ್ರಜ್ಞಾನ ಸಾಧನವನ್ನು ರೂಪಿಸಲಿವೆ. 'ಆದರೆ ತಂತ್ರಜ್ಞಾನವು ಇದರಲ್ಲಿ ಸರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ದೃಢಪಡಿಸಿಕೊಳ್ಳಲು ಸಾಕಷ್ಟು ತಪಾಸಣೆ, ಪರೀಕ್ಷೆಗಳು ನಡೆಯಬೇಕಿವೆ. ಅದು ಆದ ನಂತರ ಕಂಪ್ಯೂಟರುಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ. ಒಟ್ಟಿನಲ್ಲಿ ಆರು ತಿಂಗಳೊಳಗೆ ಇದನ್ನು ಬಿಡುಗಡೆಗೊಳಿಸುವ ಗುರಿ ಇದೆ' ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆಯ ಉನ್ನತ ಶಿಕ್ಷಣ ಕಾರ್ಯದರ್ಶಿ ಆರ್.ಪಿ.ಅಗರವಾಲ್ ಸುದ್ದಿಗಾರರಿಗೆ ಗುರುವಾರ ತಿಳಿಸಿದ್ದಾರೆ.
ಹೆಚ್ಚಿಸಬಹುದಾದ ಮೆಮರಿ, ಲ್ಯಾನ್ ಮತ್ತು ವೈಫೈ ಸೌಲಭ್ಯಗಳು ಈ ಪುಟ್ಟ ಕಂಪ್ಯೂಟರಿನಲ್ಲಿ ಇರುತ್ತವೆ. ಇದರ ವೆಚ್ಚ ಕೇವಲ 10 ಡಾಲರ್. ತಮ್ಮ ಮಕ್ಕಳಿಗೆ ಹೆತ್ತವರೇನಾದರೂ ಉಡುಗೊರೆ ಕೊಡಬೇಕೆಂದಿದ್ದರೆ, ಅವರು ಇದನ್ನು ಖರೀದಿಸಿ ಕೊಡಬಹುದು ಎಂದು ಅವರು ಹೇಳಿದ್ದಾರೆ.
ವಿದ್ಯಾರ್ಥಿಗಳು ಇ-ಕಂಟೆಂಟ್ ಫೀಡ್ ಅನ್ನು ಸುಲಭವಾಗಿ ಪಡೆದುಕೊಂಡು ತಮ್ಮ ಕಂಪ್ಯೂಟರುಗಳಿಗೆ ಲೋಡ್ ಮಾಡಿಕೊಳ್ಳಬಹುದು ಮತ್ತು ಅದರ ಸದುಪಯೋಗ ಪಡೆದುಕೊಳ್ಳಬಹುದು. ಶೈಕ್ಷಣಿಕ ಸಂಸ್ಥೆಗಳಿಗೆ ಸರಕಾರವು ಈ ಕಂಪ್ಯೂಟರುಗಳನ್ನು ಸಬ್ಸಿಡಿ ದರದಲ್ಲಿ ಒದಗಿಸಲಿದೆ ಎಂದು ಅಗರವಾಲ್ ತಿಳಿಸಿದ್ದಾರೆ.
ಈ ಮಾದರಿಯ ಕಂಪ್ಯೂಟರುಗಳ ಉತ್ಪಾದನೆಗೆ ಸರಕಾರವು ಹಲವಾರು ಏಜೆನ್ಸಿಗಳನ್ನು ಸಂಪರ್ಕಿಸಿದ್ದು, ಜಂಟಿ ಸಹಯೋಗದೊಂದಿಗೆ ಉತ್ಪಾದನೆ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. |