ಕಡಿಮೆ ಪ್ರಯಾಣಿಕ ವೆಚ್ಚದ ವಿಮಾನಯಾನ ಸಂಸ್ಥೆಯಾದ ಅಲ್-ಅರೇಬಿಯಾ ಏರ್‌ಲೈನ್ಸ್, ಗೋವಾ, ಪಂಜಾಬ್ ಮತ್ತು ಕರ್ನಾಟಕದ ಮಂಗಳೂರಿಗೆ ವಿಮಾನಯಾನ ಸೇವೆಯನ್ನು ಆರಂಭಿಸಲು ಸರಕಾರದ ಅನುಮತಿ ಕೋರಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮತ್ತು ಶಾರ್ಜಾ ನಡುವಣ ಪ್ರಯಾಣಿಕ ದರವನ್ನು ಕೇವಲ 1340 ರೂಪಾಯಿಗಳಾಗಿ (ತೆರಿಗೆಗಳನ್ನು ಹೊರತುಪಡಿಸಿ) ಸೀಮಿತಗೊಳಿಸಿ ನೂತನ ದರಗಳನ್ನು ಘೋಷಣೆ ಮಾಡಲಾಗಿದೆ. ಶಾರ್ಜಾ ಮೂಲದ ವಿಮಾನಯಾನ ಸಂಸ್ಥೆ, ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ವಿಮಾನಯಾನ ಸಂಸ್ಥೆಗಳಲ್ಲಿಯೇ ಹೆಚ್ಚಿನ ಯಶಸ್ಸನ್ನು ಪಡೆದಿದೆ ಎಂದು ಸುದ್ದಿಗಾರರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಅಲ್-ಅರೇಬಿಯಾ ಜಗತ್ತಿನಾದ್ಯಂತ 44 ನಗರಗಳಲ್ಲಿ ಹಾರಾಟ ನಡೆಸುತ್ತಿದ್ದು, ಭಾರತದಲ್ಲಿ 12 ನಗರಗಳಿಗೆ ಸಂಚರಿಸುತ್ತಿದೆ. ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ವಿಮಾನಯಾನ ಸಂಸ್ಥೆಗಳಲ್ಲಿ ಅಲ್-ಅರೇಬಿಯಾ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಎರಡರಿಂದ ಮೂರು ನೂತನ ವಿಮಾನಯಾನ ಸೇವೆಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಮಂಗಳೂರು, ಪಣಜಿ ಮತ್ತು ಅಮೃತ್‌ಸರ್‌ಗಳಿಗೆ ವಿಮಾನಯಾನ ಸೇವೆ ವಿಸ್ತರಿಸಲು ಆಸಕ್ತಿಯನ್ನು ಹೊಂದಿದ್ದೇವೆ. ವಿಮಾನ ಸೇವೆ ವಿಸ್ತರಣೆಗೆ ಸರಕಾರದ ಅನುಮತಿಯನ್ನು ಕೋರಲಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.ಶಾರ್ಜಾದಿಂದ ನೇರ ವಿಮಾನ ಸೌಲಭ್ಯವನ್ನು, ಬೆಂಗಳೂರು, ಅಹ್ಮದಾಬಾದ್, ಚೆನ್ನೈ, ಜೈಪುರ್, ಕೊಚ್ಚಿ, ಮುಂಬೈ, ನಾಗ್ಪುರ್, ಕೊಯಿಮುತ್ತೂರ್, ತಿರುವನಂತಪುರಂ , ಹೈದ್ರಾಬಾದ್, ಕೊಝಿಕೋಡ್, ಮತ್ತು ದೆಹಲಿ ನಗರಗಳಿಗೆ ವಿಸ್ತರಿಸಲಾಗಿದ್ದು, ಶೇ.94 ರಷ್ಟು ಪ್ರಯಾಣಿಕರ ಒತ್ತಡವಿದೆ ಎಂದು ಅಲ್-ಅರೇಬಿಯಾ ವಿಮಾನಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. |