ಸತ್ಯಂ ಕಂಪ್ಯೂಟರ್ಸ್ ಕಂಪೆನಿಯನ್ನು 408 ಮಿಲಿಯನ್ ಡಾಲರ್‌ಗಳಿಗೆ ಖರೀದಿಸಲು ಆಸಕ್ತಿ ಹೊಂದಿರುವುದಾಗಿ ಬಿ.ಕೆ ಮೋದಿ ಸಂಚಾಲಿತ ಸ್ಪೈಸ್ ಗ್ರೂಪ್ ಸತ್ಯಂ ಅಡಳಿತ ಮಂಡಳಿಗೆ ಮಾಹಿತಿ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸತ್ಯಂ ಖರೀದಿಗೆ ಅಗತ್ಯವಾದ ಶೇರುಗಳ ಖರೀದಿ ಕುರಿತಂತೆ ಸತ್ಯಂ ಕಂಪ್ಯೂಟರ್ಸ್‌ನ ಮಧ್ಯಂತರ ಅಡಳಿತ ಮಂಡಳಿಗೆ ಪತ್ರ ಬರೆಯಲಾಗಿದೆ ಎಂದು ಸ್ಪೈಸ್ ಮುಖ್ಯಸ್ಥ ಬಿ.ಕೆ ಮೋದಿ ತಿಳಿಸಿದ್ದಾರೆ.
ಸ್ಪೈಸ್ ಗ್ರೂಪ್ ಸಂಸ್ಥೆ ಬಿಪಿಒ, ಐಟಿ, ರೀಟೆಲ್ ಮತ್ತು ಮೊಬೈಲ್ ಹ್ಯಾಂಡ್‌ಸೆಟ್‌ಗಳ ಉದ್ಯಮಗಳಲ್ಲಿ ಮುನ್ನಡೆ ಸಾಧಿಸಿದ್ದು, ಸತ್ಯಂ ಖರೀದಿ ದರವನ್ನು ಇಲ್ಲಿಯವರೆಗೆ ಚರ್ಚಿಸಲಾಗಿಲ್ಲ ಎಂದು ಮೋದಿ ತಿಳಿಸಿದ್ದಾರೆ.
ಸತ್ಯಂ ಮಾಜಿ ಮುಖ್ಯಸ್ಥ ರಾಮಲಿಂಗಾರಾಜು 7800 ಕೋಟಿ ರೂ.ಗಳ ವಂಚನೆ ಮಾಡಿ ರಾಜೀನಾಮೆ ನೀಡಿದ ನಂತರ, ಸತ್ಯಂ ಸಂಸ್ಥೆಯನ್ನು ಖರೀದಿಸಲು ಇಂಜಿನಿಯರಿಂಗ್ ಕ್ಷೇತ್ರದ ದೈತ್ಯ ಕಂಪೆನಿ ಲಾರ್ಸನ್ ಆಂಡ್ ಟೌಬ್ರೋ ನಿರ್ಧರಿಸಿ ಸತ್ಯಂನ ಶೇ.12 ರಷ್ಟು ಶೇರುಗಳನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿತ್ತು.
ಎಲ್ ಆಂಡ್ ಟಿ ಮುಖ್ಯಸ್ಥ ಎ.ಎಂ ನಾಯಕ್, ಕಾರ್ಪೋರೇಟ್ ವ್ಯವಹಾರಗಳ ಸಚಿವ ಪ್ರೆಮ್ ಚಂದ್ ಗುಪ್ತಾ ಅವರನ್ನು ಭೇಟಿ ಮಾಡಿ ಸತ್ಯಂ ಖರೀದಿಯ ಕುರಿತಂತೆ ಚರ್ಚಿಸಿದರು. |