ಇಂಧನ ದರಗಳ ಇಳಿಕೆಯಿಂದಾಗಿ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ದೇಶಿಯ ಹಾರಟಗಳ ಮೇಲೆ ಮತ್ತಷ್ಟು ಪ್ರಯಾಣ ದರಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.ನೂತನ ಎಪಿಇಎಕ್ಸ್-21ಯೋಜನೆಯಡಿ ಫೆಬ್ರವರಿ 28ರೊಳಗೆ ಪ್ರಯಾಣಿಸುವ ಪ್ರಯಾಣಿಕರು 99 ರೂಪಾಯಿಗಳ ಮೂಲದರದೊಂದಿಗೆ ಪ್ರಯಾಣಿಕ ಸೇವಾ ಶುಲ್ಕ 225 ರೂಪಾಯಿ ಹಾಗೂ ಇಂಧನ ಸರ್‌ಚಾರ್ಜ್ 2,700 ರೂಪಾಯಿಗಳು ಮಾತ್ರ ಭರಿಸಬೇಕಾಗುತ್ತದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.ದೇಶಿಯ ಹಾರಾಟ ನಡೆಸುವ ಸರಕಾರಿ ಸ್ವಾಮ್ಯದ ಬಹುತೇಕ ಏರ್‌ಲೈನ್ಸ್ ಸಂಸ್ಥೆಗಳಿಗೆ ಅನ್ವಯವಾಗಲಿದೆ ಎಂದು ಏರ್ ಇಂಡಿಯಾ ವಕ್ತಾರರು ಹೇಳಿದ್ದಾರೆ. ಕಳೆದ ಡಿಸೆಂಬರ್ 30 ರಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ, 20 ಮಹಾನಗರಗಳಿಗೆ ಶೇ.50 ರಷ್ಟು ಮೂಲದರವನ್ನು ಕಡಿತಗೊಳಿಸಿ ಆದೇಶ ಹೊರಡಿಸಿತ್ತು. ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದ ವಿಮಾನ ಪ್ರಯಾಣ ದರಗಳು ಇಳಿಕೆಯಾಗುತ್ತಿದ್ದು, ಜಾಗತಿಕ ಆರ್ಥಿಕ ಕುಸಿತ ಹಾಗೂ ವಿಮಾನಯಾನ ಸಂಸ್ಥೆಗಳ ಕುಸಿದ ಆರ್ಥಿಕತೆ ಮಧ್ಯೆಯು ದೇಶಿಯ ಹಾರಾಟದಲ್ಲಿ ಏರ್‌ಲೈನ್ಸ್‌ಗಳು ಸ್ಪರ್ಧಾತ್ಮಕ ವಾತಾವರಣ ಸೃಷ್ಟಿಸಿವೆ. |