ಸತ್ಯಂ ಸಂಸ್ಥಾಪಕ ರಾಮಲಿಂಗಾರಾಜು ವಂಚನೆ ನಡೆಸಿದ ಸತ್ಯಂ ಕಂಪ್ಯೂಟರ್ ಸಂಸ್ಥೆ ಮುಂಬರುವ ದಿನಗಳಲ್ಲಿ ಎಂದಿನಂತೆ ಜಾಗತಿಕ ಮಟ್ಟದ ಸೇವೆಯನ್ನು ನೀಡಲಿದೆ ಎನ್ನುವುದನ್ನು ಭಾರತ ವಿಶ್ವಕ್ಕೆ ಮನವರಿಕೆ ಮಾಡಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಕಮಲ್‌ನಾಥ್ ಹೇಳಿದ್ದಾರೆ.
ಕಂಪೆನಿಗೆ ನೂತನ ನಿರ್ದೇಶಕ ಮಂಡಳಿಯನ್ನು ನೇಮಕ ಮಾಡಲಾಗಿದ್ದು, ಸತ್ಯಂ ಕಂಪ್ಯೂಟರ್ಸ್ ಸಂಸ್ಥೆ ತನ್ನ ಗ್ರಾಹಕರಿಗೆ ಜಾಗತಿಕ ಮಟ್ಟದ ಸೇವೆಯನ್ನು ಮುಂದುವರಿಸಲಿದೆ. ಸತ್ಯಂ ಸಂಸ್ಥೆಯನ್ನು ಮಾಲೀಕತ್ವದಿಂದ ಪ್ರತ್ಯೇಕಿಸಲಾಗಿದೆ ಎಂದು ಸಚಿವ ಕಮಲ್‌ನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸತ್ಯಂನ ಬ್ಲೂಚಿಪ್ ಗ್ರಾಹಕರು ಕಳೆದ ಹಲವು ವರ್ಷಗಳಿಂದ ಜಾಗತಿಕ ಮಟ್ಟದ ಸೇವೆಯನ್ನು ಪಡೆಯುತ್ತಿದ್ದು, ನೂತನ ಅಡಳಿತ ಮಂಡಳಿಯ ನೇಮಕದೊಂದಿಗೆ ಎಂದಿನಂತೆ ಮುಂದುವರಿಯಲಿದೆ. ಯಾವುದೇ ಆತಂಕ ಬೇಡ ನೂತನ ಅಡಳಿತ ಮಂಡಳಿ ಸೂಕ್ತವಾಗಿ ಕಾರ್ಯನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಮೆರಿಕದ ಶೇರುಪೇಟೆ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದ ಸತ್ಯಂ ಸಂಸ್ಥೆಯ ವಂಚನೆ ಆಶ್ಚರ್ಯಕರ ಹಾಗೂ ಆಘಾತ ಮೂಡಿಸಿದೆ. ಆದರೆ ಇದರಿಂದ ದೇಶದ ಕಾರ್ಪೋರೇಟ್ ಕ್ಷೇತ್ರಕ್ಕೆ ಯಾವುದೇ ನಕಾರಾತ್ಮಕ ಪ್ರಬಾವ ಬೀರುವುದಿಲ್ಲ ಎಂದು ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ. |