ದೇಶದ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಪ್ರೋ ಸಂಸ್ಥೆ, ಕೆಲ ವಿಭಾಗಗಳಿಗೆ ಅಗತ್ಯವಾಗಿರುವ ಟೆಕ್ನಿಕಲ್ ಸಪೋರ್ಟ್, ಆಫ್‌ಶೋರಿಂಗ್ ಕ್ಷೇತ್ರಗಳಿಗಾಗಿ ಸುಮಾರು 8 ಸಾವಿರ ನೂತನ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷ 14ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿದ್ದು, ಅಗತ್ಯವಿರುವ 8 ಸಾವಿರ ಹುದ್ದೆಗಳನ್ನು ಪ್ರಸಕ್ತ ವರ್ಷದ ಆರ್ಥಿಕ ಸಾಲಿನ ಅಂತ್ಯದೊಳಗೆ ನೇಮಕ ಮಾಡಿಕೊಳ್ಳಲಿದೆ. ನೇಮಕಾತಿ ಪತ್ರಗಳನ್ನು ಪಡೆದ ಅಭ್ಯರ್ಥಿಗಳು ವಿಳಂಬ ಮಾಡದೇ ಕೂಡಲೇ ಕೆಲಸಕ್ಕೆ ಹಾಜರಾಗಬಹುದಾಗಿದೆ ಎಂದು ವಿಪ್ರೋ ಮಾನವ ಸಂಪನ್ಮೂಲ ಉಪಾಧ್ಯಕ್ಷರು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಪ್ರೋ ಮೂರನೇ ತ್ರೈಮಾಸಿಕ ವರದಿಯಲ್ಲಿ, ಮಾಹಿತಿ ತಂತ್ರಜ್ಞಾನ ಸೇವಾ ಕ್ಷೇತ್ರದಲ್ಲಿರುವ ಸುಮಾರು 1,100 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿರುವುದಾಗಿ ಮೊದಲ ಬಾರಿಗೆ ಹೇಳಿಕೆ ನೀಡಿತ್ತು. ವಿಪ್ರೋ ಸಂಸ್ಥೆಯಲ್ಲಿ 2008 ಡಿಸೆಂಬರ್ 31ಕ್ಕೆ ಅಂತ್ಯಗೊಂಡಂತೆ 96,965 ಉದ್ಯೋಗಿಗಳಿದ್ದು,ಐಟಿ ಸೇವೆಯಲ್ಲಿ 75,385, ಬಿಪಿಒ ಯುನಿಟ್‌ನಲ್ಲಿ 21,578 ಉದ್ಯೋಗಿಗಳಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |