ನಾಗ್‌ಪುರ್ : ಜಾಗತಿಕ ಆರ್ಥಿಕ ಕುಸಿತದ ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ 10 ಸಾವಿರ ಹುದ್ದೆಗಳನ್ನು ಕಡಿತ ಮಾಡಿದ್ದು, ಭಾರತದಲ್ಲಿರುವ ಘಟಕಗಳಲ್ಲಿ ಹುದ್ದೆಗಳ ಕಡಿತವಿಲ್ಲ ಎಂದು ವಿಮಾನ ತಯಾರಿಕೆ ಸಂಸ್ಥೆ ಬೋಯಿಂಗ್ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.
ಜಾಗತಿಕ ಆರ್ಥಿಕ ಕುಸಿತ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ವ್ಯಾಪಕ ಪರಿಣಾಮ ಬೀರಿದೆ. ಕೆಲ ದಿನಗಳ ಹಿಂದೆ ವಾರ್ಷಿಕ ಹಣಕಾಸಿನ ವರದಿಯನ್ನು ಬಿಡುಗಡೆ ಮಾಡುವ ಮೊದಲು ಜಗತ್ತಿನಾದ್ಯಂತ 10 ಸಾವಿರ ಹುದ್ದೆಗಳ ಕಡಿತ ಘೋಷಿಸಲಾಗಿದೆ ಎಂದು ಬೋಯಿಂಗ್ ಉಪಾಧ್ಯಕ್ಷ ದಿನೇಶ್ ಕೆಸ್ಕರ್ ತಿಳಿಸಿದ್ದಾರೆ.
ಯುದ್ಧ ವಿಮಾನಗಳು, ಸರಕು ಸಾಗಾಣೆ ವಿಮಾನ ಹಾಗೂ ಪ್ರಯಾಣಿಕ ವಿಮಾನಗಳನ್ನು ತಯಾರಿಸುವ ಬೋಯಿಂಗ್ ಸಂಸ್ಖೆ ಭಾರತದಲ್ಲಿ ಯಾವುದೇ ಹುದ್ದೆಗಳನ್ನು ಸಧ್ಯಕ್ಕೆ ಕಡಿತ ಮಾಡುವ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದೆ.
ಬೋಯಿಂಗ್ ಸಂಸ್ಥೆಗೆ ಜಗತ್ತಿನಾದ್ಯಂತ 275 ಬಿಲಿಯನ್ ಡಾಲರ್‌ಗಳ ವೆಚ್ಚದ 3,700 ವಿಮಾನಗಳ ಸರಬರಾಜಿಗೆ ಬೇಡಿಕೆಯಿದ್ದು, ಬೇಡಿಕೆಗಳನ್ನು ಪೂರೈಸಲು ಕನಿಷ್ಟ ಐದು ವರ್ಷಗಳ ಕಾಲಾವಧಿ ಅಗತ್ಯವಾಗಿದೆ ಎಂದು ಕೆಸ್ಕರ್ ತಿಳಿಸಿದ್ದಾರೆ.
ಬೋಯಿಂಗ್ ಸಂಸ್ಥೆಯಲ್ಲಿ ಜಗತ್ತಿನಾದ್ಯಂತ ಸುಮಾರು 1.76 ಲಕ್ಷ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. |