ಮುಂಬರುವ ಏಪ್ರಿಲ್‌ನಲ್ಲಿ ನಡೆಯಲಿರುವ ಜಿ 20 ರಾಷ್ಟ್ರಗಳ ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟು ನಿವಾರಣೆಗೆ ಪರಿಹಾರ ಸೂಚಿಸುವುದು ಅಗತ್ಯವಾಗಿದೆ ಎಂದು ಬ್ರಿಟನ್ ಪ್ರಧಾನಿ ಗೋರ್ಡಾನ್ ಬ್ರೌನ್ ಹೇಳಿದ್ದಾರೆ. ಏಪ್ರಿಲ್ 2 ರಂದು ನಡೆಯಲಿರುವ ಜಿ-20 ರಾಷ್ಟ್ರಗಳ ಶೃಂಗಸಭೆಯ ಆತಿಥ್ಯವನ್ನು ಬ್ರಿಟನ್ ವಹಿಸಲಿದ್ದು, ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಹಾಗೂ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಪರಸ್ಪರ ಸಹಕಾರದೊಂದಿಗೆ ಜಾಗತಿಕ ಆರ್ಥಿಕ ಕುಸಿತದಿಂದ ಹೊರಬರಲು ಯೋಜನೆಗಳನ್ನು ಪ್ರಕಟಿಸುವುದು ಅಗತ್ಯವಾಗಿದೆ ಎಂದು ಬ್ರೌನ್ ಪ್ರತಿಪಾದಿಸಿದ್ದಾರೆ. ಲಂಡನ್‌ನಲ್ಲಿ ಏಪ್ರಿಲ್ 2 ರಂದು ನಡೆಯುವ ಜಿ-20 ರಾಷ್ಟ್ರಗಳ ಶೃಂಗಸಬೆ ಕೇವಲ ಜನರನ್ನು ಒಂದುಗೂಡಿಸುವುದಿಲ್ಲ. ಜಾಗತಿಕ ಆರ್ಥಿಕ ಕುಸಿತದ ಸಮಸ್ಯೆಗೆ ಪರಿಹಾರ ಕೂಡಾ ಸೂಚಿಸಲಿದೆ ಎಂದು ಡೈಲಿ ಟೆಲಿಗ್ರಾಫ್‌ಗೆ ನೀಡಿದ ಸಂದರ್ಶನದಲ್ಲಿ ಪ್ರದಾನಿ ಬ್ರೌನ್ ತಿಳಿಸಿದ್ದಾರೆ.ನವೆಂಬರ್ ತಿಂಗಳಿನಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ಜಿ-20 ರಾಷ್ಟ್ರಗಳ ಶೃಂಗಸಭೆಯಲ್ಲಿ ಜಾಗತಿಕ ಆರ್ಥಿಕ ಕುಸಿತವನ್ನು ತಡೆಯಲು ಉತ್ತೇಜನ ಪ್ಯಾಕೇಜ್ ಸೇರಿದಂತೆ ಅಗತ್ಯವಾದಲ್ಲಿ ಆರ್ಥಿಕ ನೀತಿಗಳಿಗೆ ತಿದ್ದುಪಡಿ ತರಲು ನಿರ್ಧರಿಸಲಾಗಿತ್ತು. |