ಜನರನ್ನು ಅಂತರ್ಜಾಲ-ಸುಶಿಕ್ಷಿತರನ್ನಾಗಿಸುವ ನಿಟ್ಟಿನಲ್ಲಿ ಪ್ರಧಾನ ಹೆಜ್ಜೆ ಇರಿಸಿರುವ ಇಂಟರ್ನೆಟ್ ದಿಗ್ಗಜ ಕಂಪನಿ ಗೂಗಲ್ ಇಂಡಿಯಾ, ತನ್ನ ಮಹತ್ವಾಕಾಂಕ್ಷೆಯ 'ಇಂಟರ್ನೆಟ್ ಬಸ್' ಎಂಬ ಸಂಚಾರಿ ಬಸ್ ಅಭಿಯಾನವನ್ನು ಮಂಗಳವಾರ ಚೆನ್ನೈಯಲ್ಲಿ ಆರಂಭಿಸಿತು.ಸದ್ಯಕ್ಕೆ ತಮಿಳುನಾಡಿನಲ್ಲಿ ಆರಂಭವಾಗಿರುವ ಈ 'ಇಂಟರ್ನೆಟ್ ಬಸ್' ಯೋಜನೆಯನ್ನು, ಜನರ ಪ್ರತಿಕ್ರಿಯೆ, ಫಲಿತಾಂಶಗಳ ವಿಶ್ಲೇಷಣೆ ಬಳಿಕ ಉಳಿದ ರಾಜ್ಯಗಳಿಗೂ ನಿಧಾನವಾಗಿ ವಿಸ್ತರಿಸಲಾಗುತ್ತದೆ ಎಂದು ಗೂಗಲ್ ಇಂಡಿಯಾದ ಆರ್&ಡಿ ವಿಭಾಗದ ಮುಖ್ಯಸ್ಥ ಡಾ.ಪ್ರಸಾದ್ ಭಾರತ್ ರಾಮ್ ಅವರು ಸುದ್ದಿಗಾರರಿಗೆ ತಿಳಿಸಿದರು.ಮಾಹಿತಿ, ಸಂವಹನ, ಮನರಂಜನೆ ಮತ್ತು ಶಿಕ್ಷಣ ಎಂಬ ನಾಲ್ಕು ಮೂಲೋದ್ದೇಶಗಳೊಂದಿಗೆ, ಒಂದುವರೆ ತಿಂಗಳುಗಳಲ್ಲಿ ತಮಿಳುನಾಡಿನ ಎರಡು ಮತ್ತು ಮೂರನೇ ಸ್ತರದ 15 ಪಟ್ಟಣಗಳಲ್ಲಿ ಈ ಬಸ್ ಸಂಚರಿಸಲಿದ್ದು, ಜನಸಾಮಾನ್ಯರು ಕೂಡ ತಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಂತರ್ಜಾಲವನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಬಗ್ಗೆ ಜಾಗೃತಿ ಮೂಡಿಸಲಿದೆ. ಅಂತರ್ಜಾಲ ಶೋಧ, ಇ-ಮೇಲ್, ಸಮುದಾಯ ತಾಣಗಳು, ಆನ್‌ಲೈನ್ ನಕ್ಷೆಯ ಬಳಕೆ ಮುಂತಾಗಿ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಮೂಲಭೂತ ಅಂತರ್ಜಾಲ ವೈಶಿಷ್ಟ್ಯಗಳೊಂದಿಗೆ ಜನತೆಯನ್ನು ಸುಶಿಕ್ಷಿತರನ್ನಾಗಿಸುವುದರೊಂದಿಗೆ, ಅಂತರ್ಜಾಲವು ದೈನಂದಿನ ಜೀವನವನ್ನು ಹೇಗೆ ಸರಳವಾಗಿಸುತ್ತದೆ ಎಂಬುದರ ಬಗ್ಗೆ ತಿಳಿಹೇಳಲಾಗುತ್ತದೆ ಎಂದು ಡಾ.ಪ್ರಸಾದ್ ರಾಮ್ ವಿವರಿಸಿದರು.ಈ ಬಸ್ಸಿನ ಮೂಲಕ, ನಿಜವಾಗಿಯೂ ಸಂಪೂರ್ಣ ಪ್ರಯೋಜನ ಪಡೆಯಬಲ್ಲ ಜನರಿಗೆ ಈ ಮಾಧ್ಯಮದ ಶಕ್ತಿ ಏನೆಂಬುದನ್ನು ತೋರಿಸಿಕೊಡಲು ನಾವಿಚ್ಛಿಸಿದ್ದೇವೆ. ಕನಿಷ್ಠಪಕ್ಷ ಸಂಕ್ಷಿಪ್ತವಾಗಿ ನಾವು ಅಂತರ್ಜಾಲ ಮಾಧ್ಯಮದ ಕುರಿತು ಹೇಳಿಕೊಟ್ಟರೂ, ಅವರು ಅದರಲ್ಲೇನಿದೆ ಎಂದು ತಿಳಿಯುವ ಕುತೂಹಲದಿಂದ ಮತ್ತೆ ಮತ್ತೆ ಅಂತರ್ಜಾಲಕ್ಕೆ ಆಕರ್ಷಿತರಾಗುತ್ತಾರೆ ಎಂಬ ನಂಬಿಕೆ ನಮ್ಮದು ಎಂದು ಡಾ.ರಾಮ್ ವಿವರಿಸಿದರು. ಆದರೆ, ಇಂಟರ್ನೆಟ್ ಲಭ್ಯತೆ, ವೆಚ್ಚ ಮತ್ತು ಮಾಹಿತಿ ಮುಂತಾದವುಗಳನ್ನು ಜನರಿಗೆ ಸುಲಭಸಾಧ್ಯವಾಗಿಸುವುದು ಸರಕಾರ, ಅಂತರ್ಜಾಲ ಉದ್ಯಮ ಮತ್ತು ಶಿಕ್ಷಣಸಂಸ್ಥೆಗಳ ಸಾಮುದಾಯಿಕ ಜವಾಬ್ದಾರಿಯಾಗಿದೆ ಎಂದು ಹೇಳಿದ ಅವರು, ಇದು ಸಾಧ್ಯವಾದಲ್ಲಿ, ಅಂತರ್ಜಾಲ ಸಾಧ್ಯತೆಗಳಿಗೆ ಮಿತಿಯೇ ಇಲ್ಲ ಎಂದು ಆಶಾವಾದ ವ್ಯಕ್ತಪಡಿಸಿದರು.ಸಾಮಾನ್ಯ ಬಳಕೆದಾರನೊಬ್ಬನಿಗೆ ಇಂಟರ್ನೆಟ್ ಬಗ್ಗೆ ಸರಳವಾಗಿ ಹೇಳಿಕೊಡುವುದು ಈ ಬಸ್‌ನ ಉದ್ದೇಶ. ಉಪಗ್ರಹ ಮೂಲಕ ಬ್ರಾಡ್‌ಬ್ಯಾಂಡ್ ಸಂಪರ್ಕ, ಕಂಪ್ಯೂಟರುಗಳು, ಮಲ್ಟಿಮೀಡಿಯಾ ಉಪಕರಣಗಳೆಲ್ಲವೂ ಇರುವ ಬಸ್‌ನೊಳಗೆ, ಅಂತರ್ಜಾಲವನ್ನು ಯಾವೆಲ್ಲಾ ರೀತಿಯಲ್ಲಿ ಬಳಸಬಹುದು ಎಂಬ ಕುರಿತಾಗಿ ವೀಡಿಯೋ ಸಹಿತ ವಿವರಣೆಗಳು ಲಭ್ಯವಿರುತ್ತದೆ. ಬೇರೊಂದು ಪಟ್ಟಣದಲ್ಲಿರುವ ತಮ್ಮ ಆಪ್ತೇಷ್ಟರೊಂದಿಗೆ ಹೇಗೆ ವೀಡಿಯೋ ಸಹಿತ ಸಂವಾದ ಮಾಡಬಹುದು, ಸಾಮಾನ್ಯವಾಗಿ ಲಭ್ಯವಿಲ್ಲದ ಮಾಹಿತಿಯನ್ನು ವಿದ್ಯಾರ್ಥಿಯೊಬ್ಬ ಇಂಟರ್ನೆಟ್ ಸರ್ಚ್ ಎಂಜಿನ್ ಬಳಸಿ ಹೇಗೆ ಪಡೆಯಬಹುದು, ತಮ್ಮ ವೀಡಿಯೋಗಳನ್ನು ಹೇಗೆ ಯು-ಟ್ಯೂಬ್ ಮೂಲಕ ಗೆಳೆಯರೊಂದಿಗೆ ಹಂಚಿಕೊಳ್ಳಬಹುದು, ಕಿರು ಉದ್ಯಮಿಯೊಬ್ಬ ತನ್ನ ವಹಿವಾಟನ್ನು ಅಂತರ್ಜಾಲದ ಮೂಲಕ ಹೇಗೆ ವಿಸ್ತರಿಸಬಹುದು ಎಂಬಿತ್ಯಾದಿ ವಿವರಣೆ ನೀಡಲಾಗುತ್ತದೆ.ಅಲ್ಲದೆ, ಭಾರತೀಯ ಭಾಷೆಗಳಲ್ಲಿ ಯಾವೆಲ್ಲಾ ಸಾಧ್ಯತೆಗಳಿವೆ, ಭಾಷೆಗಳಿಗೆ ಸಂಬಂಧಿಸಿದಂತೆ ಯಾವೆಲ್ಲಾ ಟೂಲ್‌ಗಳಿವೆ ಎಂಬುದರ ಕುರಿತಾಗಿಯೂ ಜನರಿಗೆ ಅರಿವು ಮೂಡಿಸಲಿದೆ ಈ ಬಸ್. ಗೂಗಲ್ ಇದಕ್ಕಾಗಿ "ಗೂಗಲ್ ಡಾಟ್ ಕೋ ಡಾಟ್ ಇನ್/ಇಂಟರ್ನೆಟ್‌ಬಸ್" ಎಂಬ ಅಂತರ್ಜಾಲ ತಾಣವೊಂದನ್ನು ಮೀಸಲಿಟ್ಟಿದ್ದು, ಹೆಚ್ಚಿನ ವಿವರಗಳು ಇದರಲ್ಲಿ ಲಭ್ಯವಿರುತ್ತವೆ. ಗೂಗಲ್ ಈಗಾಗಲೇ ಗೂಗಲ್ ಎಸ್ಎಂಎಸ್ ಸರ್ಚ್, ಎಸ್ಎಂಎಸ್ ಚಾನೆಲ್ಸ್, ಗೂಗಲ್ ವಾಯ್ಸ್ ಲೋಕಲ್ ಸರ್ಚ್ ಸೇವೆ ಮತ್ತು ಗೂಗಲ್ ಮ್ಯಾಪ್ ಮೇಕರ್ ಮುಂತಾದ ಸೇವೆಗಳನ್ನು ಜನರಿಗೆ ಒದಗಿಸತೊಡಗಿದ್ದು, ಗೂಗಲ್‌ನ ಅಪ್ಲಿಕೇಶನ್‌ಗಳನ್ನು ಆಯಾ ಭಾಷೆಗಳಿಗೆ ತರ್ಜುಮೆಗೊಳಿಸಿ, ಇಂಗ್ಲಿಷ್ ಅಲ್ಪ ಜ್ಞಾನವಿರುವವರೂ ಅವುಗಳನ್ನು ಸುಲಭವಾಗಿ ಬಳಸುವಂತೆ ಮಾಡಿದೆ. ಕನ್ನಡ ಸೇರಿದಂತೆ ಐದು ಭಾರತೀಯ ಭಾಷೆಗಳಲ್ಲಿ ಲಿಪ್ಯಂತರ (ಟ್ರಾನ್ಸ್‌ಲಿಟರೇಶನ್) ಸೌಲಭ್ಯ, ನಾಲ್ಕು ಭಾರತೀಯ ಭಾಷೆಗಳಲ್ಲಿ ಗೂಗಲ್ ನ್ಯೂಸ್ ಸೇವೆ, ಇಂಗ್ಲಿಷ್-ಹಿಂದಿ ಪರಸ್ಪರ ಭಾಷಾಂತರ ಸೌಲಭ್ಯ ಮುಂತಾದವನ್ನು ಒದಗಿಸುತ್ತಿದೆ. ಇದರೊಂದಿಗೆ ಮೊಬೈಲ್ ಫೋನ್ ಕ್ಷೇತ್ರದಲ್ಲೂ ತನ್ನ ಛಾಪು ಮೂಡಿಸಿರುವ ಗೂಗಲ್, ಮೊಬೈಲ್ ಮ್ಯಾಪ್ಸ್, ಮೊಬೈಲ್ ಶೋಧ ಮತ್ತು ಮೊಬೈಲ್ ಒರ್ಕುಟ್ ಸೌಲಭ್ಯಗಳನ್ನು ನೀಡುತ್ತಿದೆ.1998 ರಲ್ಲಿ ಸ್ಟಾನ್‌ಫರ್ಡ್ ಪಿಹೆಚ್‌ಡಿ ವಿದ್ಯಾರ್ಥಿಗಳಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬ್ರಿನ್ ಎಂಬವರಿಂದ ಸಂಸ್ಥಾಪಿಸಲ್ಪಟ್ಟ ಗೂಗಲ್, ಇಂದು ಜಾಗತಿಕ ಅಂತರ್ಜಾಲ ಮಾರುಕಟ್ಟೆಯಲ್ಲಿ ಅನಿವಾರ್ಯ ಅನ್ನಿಸಿಬಿಟ್ಟಿದೆ. ಸಿಲಿಕಾನ್ ವ್ಯಾಲಿಯಲ್ಲಿ ಮುಖ್ಯ ಕಚೇರಿ ಹೊಂದಿರುವ ಗೂಗಲ್, ಅಮೆರಿಕ, ಯೂರೋಪ್ ಮತ್ತು ಏಷ್ಯಾದ ಬಹುತೇಕ ಎಲ್ಲ ದೇಶಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ. |