ಅನಧಿಕೃತವಾಗಿ 64 ಕೋಟಿ ರೂ.ಗಳ ಹಣವನ್ನು ಹಿಂಪಡೆದಿದೆ ಎಂದು ಆರೋಪಿಸಿ ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು ಕುಟುಂಬದಿಂದ ನಡೆಯುತ್ತಿದ್ದ ಮೇತಾಸ್ ಇನ್ಫ್ರಾ ಕಂಪೆನಿಯು ವೇದಾಂತ ಅಲ್ಯೂಮಿನಿಯಂ ಲಿಮಿಟೆಡ್ಗೆ ಲೀಗಲ್ ನೋಟಿಸ್ ಜಾರಿ ಮಾಡಿದೆ.
ಕಳೆದ ವರ್ಷದ ಮೇ ತಿಂಗಳಿನಲ್ಲಿ ವೇದಾಂತ ಅಲ್ಯೂಮಿನಿಯಂ ಕಂಪೆನಿಯ ಗುತ್ತಿಗೆಗಾಗಿ ಮೇತಾಸ್ ಇನ್ಫ್ರಾಸ್ಟ್ರಕ್ಚರ್ ಕಂಪೆನಿ 64 ಕೋಟಿ ರೂಪಾಯಿಗಳ ಬ್ಯಾಂಕ್ ಭದ್ರತೆಯನ್ನು ನೀಡಿತ್ತು. ಆದರೆ ಗುತ್ತಿಗೆಯನ್ನು ರದ್ದುಗೊಳಿಸದೇ ನಿಯಮಗಳನ್ನು ಪಾಲಿಸದೇ ಹಣವನ್ನು ಹಿಂದಕ್ಕೆ ಪಡೆದಿದೆ ಎಂದು ಮೇತಾಸ್ ಆರೋಪಿಸಿದೆ.
ಮೇತಾಸ್ ಲೀಗಲ್ ನೋಟಿಸ್ ಜಾರಿ ಮಾಡಿದ ಕುರಿತಂತೆ ಸ್ಪಷ್ಟನೆ ಪಡೆಯಲು ವೇದಾಂತ ಅಲ್ಯೂಮಿನೀಯಂ ಲಿಮಿಟೆಡ್ ಕಂಪೆನಿಯ ವಕ್ತಾರರು ಲಭ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಉಭಯ ಕಂಪೆನಿಗಳ ನಡುವಣ ಒಪ್ಪಂದ ರದ್ದಾದಲ್ಲಿ ಅಥವಾ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಮಾತ್ರ ಹಣವನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಆದರೆ ವೇದಾಂತ ಕಂಪೆನಿ ಅನಧಿಕೃತವಾಗಿ ಹಣವನ್ನು ಹಿಂದಕ್ಕೆ ಪಡೆದುಕೊಂಡಿದೆ ಮೇತಾಸ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ. |