ಸತ್ಯಂನ ಹಿರಿಯ ಉದ್ಯೋಗಿ ಎ.ಎಸ್.ಮೂರ್ತಿ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಆಗಿ ನೇಮಕಗೊಂಡ ಬೆನ್ನಿಗೇ, ಸತ್ಯಂ ಅಧ್ಯಕ್ಷರಾಗಿ ನಾಸ್ಕಾಂನ ಹಿಂದಿನ ಅಧ್ಯಕ್ಷ ಕಿರಣ್ ಕಾರ್ನಿಕ್ ಅವರನ್ನು ಸತ್ಯಂನ ಆರು ಮಂದಿ ಸದಸ್ಯರ ಆಡಳಿತ ಮಂಡಳಿ ಅಧ್ಯಕ್ಷರನ್ನಾಗಿ ಸರಕಾರ ನಿಯೋಜಿಸಿದೆ.
ಕಾರ್ಪೊರೇಟ್ ವ್ಯವಹಾರಗಳ ಸಚಿವ ಪಿ.ಸಿ.ಗುಪ್ತಾ ಅವರು ಶುಕ್ರವಾರ ಇದನ್ನು ತಿಳಿಸಿದ್ದಾರೆ. ಸತ್ಯಂ ಸಂಸ್ಥಾಪಕ ರಾಮಲಿಂಗಾ ರಾಜು ಅವರು ಭಾರೀ ಮೊತ್ತದ ಹಗರಣ ಮಾಡಿರುವುದಾಗಿ ಒಪ್ಪಿಕೊಂಡ ಬಳಿಕ ಸತ್ಯಂ ಮಂಡಳಿಯನ್ನು ಸರಕಾರವು ಬರ್ಖಾಸ್ತುಗೊಳಿಸಿ, ಹೊಸ ಮಂಡಳಿಯನ್ನು ನೇಮಿಸಿತ್ತು.
ಸರಕಾರ ರಚಿಸಿದ್ದ ಹೊಸ ಮಂಡಳಿ ಸದಸ್ಯರಾಗಿ ಆರಂಭದಲ್ಲಿ ಕಾರ್ನಿಕ್, ಎಚ್‌ಡಿಎಫ್‌ಸಿ ಅಧ್ಯಕ್ಷ ದೀಪಕ್ ಪಾರೇಖ್ ಮತ್ತು ಸೆಕ್ಯುರಿಟೀಸ್ ಅಪಲೇಟ್ ಟ್ರಿಬ್ಯುನಲ್‌ನ ಹಿಂದಿನ ಅಧ್ಯಕ್ಷ ಸಿ.ಅಚ್ಯುತನ್ ಅವರನ್ನು ನೇಮಿಸಲಾಗಿತ್ತು. ಬಳಿಕ ಇನ್ನೂ ಮೂವರನ್ನು (ಸಿಐಐ ಮುಖ್ಯ ಅಧಿಕಾರಿ ತರುಣ್ ದಾಸ್, ಎಲ್ಐಸಿಯ ಎಸ್.ಬಾಲಕೃಷ್ಣ ಮೇನಕ್ ಮತ್ತು ಐಸಿಎಐ ಮಾಜಿ ಅಧ್ಯಕ್ಷ ಟಿ.ಎನ್.ಮನಮೋಹನ್) ಮಂಡಳಿಗೆ ನಿಯೋಜಿಸಲಾಗಿತ್ತು.
ಸತ್ಯಂ ನೇತೃತ್ವ ವಹಿಸಲಿರುವ ಕಾರ್ನಿಕ್ ಅವರು 2001-02ರಲ್ಲಿ ನಾಸ್ಕಾಂ ಅಧ್ಯಕ್ಷರಾಗಿದ್ದರು. ಅದಕ್ಕೂ ಮೊದಲು ಐಟಿ ಕ್ಷೇತ್ರದಲ್ಲಿ ಹಲವಾರು ಹುದ್ದೆಗಳನ್ನು ನಿಭಾಯಿಸಿದ್ದರು. ಅವರು ಡಿಸ್ಕವರಿ ನೆಟ್ವರ್ಕ್‌ನ ಆಡಳಿತ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದರು. |