ನವದೆಹಲಿ : ಸತ್ಯಂ ಕಂಪೆನಿಯ ಏಕಮಾತ್ರ ಹಗರಣದಿಂದ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಉದ್ಯಮಕ್ಕೆ ಭಂಗವಿಲ್ಲ. ವಂಚನೆ ಪ್ರಕರಣವನ್ನು ಕೂಲಂಕೂಷವಾಗಿ ತನಿಖೆಗೆ ಒಳಪಡಿಸಲಾಗುತ್ತಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ರಾಮಲಿಂಗಾರಾಜು ನಡೆಸಿದ ವಂಚನೆಯನ್ನು ಸಂಪೂರ್ಣವಾಗಿ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಪ್ರಣಬ್ ಮುಖರ್ಜಿ ಎಫ್‌ಐಸಿಸಿಐ ಆಯೋಜಿಸಿದ ವಾರ್ಷಿಕ ಸಭೆಯಲ್ಲಿ ತಿಳಿಸಿದ್ದಾರೆ.
ಸತ್ಯಂ ಕಂಪೆನಿಯಲ್ಲಿರುವ ಸುಮಾರು 55 ಸಾವಿರ ಉದ್ಯೋಗಿಗಳ ಭವಿಷ್ಯಕ್ಕೆ ತೊಂದರೆಯಾಗದಂತೆ ಹಾಗೂ ಸತ್ಯಂ ಗ್ರಾಹಕರಲ್ಲಿ ವಿಶ್ವಾಸ ಮೂಡಿಸಲು ಸರಕಾರ ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ಸತ್ಯಂನಲ್ಲಿ ನಡೆದ ಏಕೈಕ ಹಗರಣದಿಂದಾಗಿ ದೇಶದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಖ್ಯಾತಿಗೆ ಧಕ್ಕೆಯಾಗುವುದಿಲ್ಲ.ದೇಶದ ಐಟಿ ಕ್ಷೇತ್ರ ವಾರ್ಷಿಕವಾಗಿ ಟ್ರಿಲಿಯನ್ ಡಾಲರ್ ವಹಿವಾಟು ನಡೆಸುತ್ತಿದೆ ಎಂದು ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ.
|