ನವದೆಹಲಿ : ಕಳೆದ 5 ವರ್ಷಗಳಿಂದ ಪ್ರಯಾಣಿಕರ ದರವನ್ನು ಹೆಚ್ಚಿಸದೇ ಹತೋಟಿಯಲ್ಲಿರಿಸಲು ಯಶಸ್ವಿಯಾದ ರೈಲ್ವೆ ಸಚಿವ ಲಾಲು ಪ್ರಸಾದ್, ಶುಕ್ರವಾರ ಸಂಸತ್ತಿನಲ್ಲಿ ರೈಲ್ವೆ ಬಜೆಟ್ ಮಂಡಿಸುವಾಗ ರೈಲು ಪ್ರಯಾಣಿಕರಿಗೆ ಇನ್ನಷ್ಟು ರಿಯಾಯಿತಿಗಳನ್ನು ಘೋಷಿಸುವರೆಂದು ನಿರೀಕ್ಷಿಸಲಾಗಿದೆ.
ರೈಲ್ವೆ ಬಜೆಟ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪರ ಬಜೆಟ್ ಮಂಡಿಸುವುದಾಗಿ ಇಂಗಿತವ್ಯಕ್ತಪಡಿಸಿದರು. 'ಲಾಲು ಬಡವರಿಗೆ ಅಥವಾ ಯಾವುದೇ ವರ್ಗಕ್ಕೆ ಅನ್ಯಾಯ ಮಾಡುವುದಿಲ್ಲವೆಂದು ಈ ರಾಷ್ಟ್ರದ ಜನತೆಗೆ ಪೂರ್ಣ ವಿಶ್ವಾಸವಿದೆ. ತಾವು ಯಾವುದೇ ವರ್ಗದ ವಿರುದ್ಧ ತಾರತಮ್ಯ ಎಣಿಸಿಲ್ಲ. ಈಗಲೇ ಬಜೆಟ್ ವಿವರಗಳನ್ನು ಹೇಳುವುದು ಸಾಧ್ಯವಿಲ್ಲ' ಎಂದೂ ಲಾಲು ಹೇಳಿದರು.
ಶುಕ್ರವಾರ ಬೆಳಿಗ್ಗೆ ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಅವರು, ಜನಪರ ಬಜೆಟ್ ಮಂಡಿಸುವ ವಿಶ್ವಾಸ ವ್ಯಕ್ತಪಡಿಸಿದರು.ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದ್ದರೂ, ಕಳೆದ ಐದು ವರ್ಷಗಳಲ್ಲಿ ರೈಲ್ವೆದರ ಹೆಚ್ಚಿಸುವುದನ್ನು ತಡೆದಿದ್ದ ಲಾಲು ಲೋಕಸಭೆ ಚುನಾವಣೆಗೆ ಮುನ್ನ, ಜನಪರ ಯೋಜನೆಗಳನ್ನು ಪ್ರಕಟಿಸುವರೆಂದು ನಿರೀಕ್ಷಿಸಲಾಗಿದೆ.
ಸರ್ಕಾರ ರೈಲ್ವೆ ಬಜೆಟ್‌ನ ಮುಖ್ಯಭಾಗವಾದ ಡೀಸೆಲ್ ದರಗಳನ್ನು ಗಮನಾರ್ಹವಾಗಿ ಇಳಿಸಿದ್ದರಿಂದ ಎಸಿ-3 ಮತ್ತು ಸಾಮಾನ್ಯ ದರ್ಜೆಯ ಪ್ರಯಾಣಿಕರ ದರದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಇಳಿಮುಖಗೊಳಿಸಬಹುದೆಂಬ ಊಹಾಪೋಹ ಹರಡಿದೆ. ಪ್ರಯಾಣಿಕರ ದರದಲ್ಲಿ ಶೇ.10ರಷ್ಟು ಕಡಿತ ಮಾಡುವ ಸಂಭವವಿದೆ ಎಂದು ಈ ವಿಷಯದ ಬಗ್ಗೆ ಪರಿಚಯವಿರುವ ಜನರು ಹೇಳಿದ್ದಾರೆ. |