ಭಾರತೀಯ ಮೂಲದ ಲಕ್ಷ್ಮಿ ಮಿತ್ತಲ್ ಹಾಗೂ ದೇಶದ ಬೃಹತ್ ಕಂಪೆನಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಜಗತ್ತಿನ ಪ್ರಭಾವಿ ಬೀಲಿಯನೇರ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.
ಯುಎಸ್ ಬಿಜಿನೆಸ್ ಮ್ಯಾಗ್‌ಜಿನ್ ಫೋರ್ಬ್ಸ್ ಪ್ರಕಟಿಸಿದ ಪಟ್ಟಿಯಲ್ಲಿ ಲಕ್ಷ್ಮಿ ಮಿತ್ತಲ್ ಮೂರನೇ ಸ್ಥಾನವನ್ನು ಪಡೆದಿದ್ದು, ಜಗತ್ತಿನ ಉಕ್ಕು ಉತ್ಪಾದನೆಯಲ್ಲಿ ಶೇ.10 ಉತ್ಪಾದನೆಯನ್ನು ಅರ್ಸೆಲ್ ಮಿತ್ತಲ್ ಘಟಕದಿಂದ ಉತ್ಪಾದಿಸಲಾಗುತ್ತದೆ.
ಭಾರತದಲ್ಲಿ ಜನಿಸಿ ಲಂಡನ್ ವಾಸಿಯಾದ ಮಿತ್ತಲ್, ಇಂಗ್ಲೆಂಡ್ ಪ್ರಭಾವಿ ರಾಜಕಾರಣಿಗಳ ಗೆಳತನದಿಂದಾಗಿ ಕೆಲ ಬಾರಿ ವಿವಾದಕ್ಕೆ ಒಳಗಾಗಿದ್ದಾರೆ. ಬ್ರಿಟನ್ ಪ್ರಧಾನಿ ಟೋನಿ ಬ್ಲೇರ್ ರೋಮೆನಿಯಾದ ಪ್ರಧಾನಿಗೆ ಪತ್ರ ಬರೆದು ರೋಮೆನಿಯಾದಲ್ಲಿರುವ ಉಕ್ಕು ಉತ್ಪಾದನೆ ಘಟಕವನ್ನು ಮಿತ್ತಲ್‌ಗೆ ಮಾರಾಟ ಮಾಡಿ ಯುರೋಪಿಯನ್ ಯುನಿಯನ್ ಪ್ರವೇಶಿಸುವಂತೆ ಪತ್ರ ಬರೆದಿರುವುದು ವಿವಾದಕ್ಕೆ ನಾಂದಿಯಾಗಿತ್ತು.
ಫೋರ್ಬ್ಸ್ ಪ್ರಭಾವಿಗಳ ಪಟ್ಟಿಯಲ್ಲಿ ಪೆಟ್ರೋಕೆಮಿಕಲ್ಸ್ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಏಳನೇ ಸ್ಥಾನವನ್ನು ಪಡೆದಿದ್ದು, ಮುಂಬೈನಲ್ಲಿ 2 ಬಿಲಿಯನ್ ಡಾಲರ್ ವೆಚ್ಚದ 27 ಅಂತಸ್ತಿನ ಮನೆಯನ್ನು ವಾಸಕ್ಕಾಗಿ ನಿರ್ಮಿಸುತ್ತಿದ್ದಾರೆ. |