ಇಂಡೋ-ಕೆನಡಾ ದೇಶಗಳ ವ್ಯಾಪಾರ ಒಪ್ಪಂದಕ್ಕೆ ಹೆಚ್ಚಿನ ಸಂಪನ್ಮೂಲಗಳು ಲಭ್ಯವಿರುವುದರಿಂದ ಜಂಟಿ ಸಹಭಾಗಿತ್ವಕ್ಕೆ ಹಾಗೂ ಹೂಡಿಕೆಗೆ ಉತ್ತಮ ವಾತಾವರಣವಿದೆ ಎಂದು ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್ ಹೇಳಿದ್ದಾರೆ. ವಿಶೇಷವಾಗಿ ಮೂಲಸೌಕರ್ಯ, ಅಟೋಮೊಬೈಲ್ ,ವಿದ್ಯುತ್ ಉತ್ಪಾದನೆ ಮತ್ತು ಪೆಟ್ರೋಲಿಯಂ ಕ್ಷೇತ್ರಗಳಲ್ಲಿ ಜಂಟಿ ಸಹಭಾಗಿತ್ವಕ್ಕೆ ಹಾಗೂ ಹೂಡಿಕೆಗೆ ವಿಫುಲ ಅವಕಾಶಗಳಿವೆ ಎಂದು ಹೇಳಿದ್ದಾರೆ. ಕೆನಡಾದ ಕೈಗಾರಿಕೆ ಸಚಿವ ಟೋನಿ ಕ್ಲೆಮೆಂಟ್ ಅವರೊಂದಿಗೆ ಸಭೆಯಲ್ಲಿ ಮಾತನಾಡಿದ ಸಚಿವ ಕಮಲ್‌ನಾಥ್, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಬೆಳೆಯುವ ದೇಶಗಳ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಕೆನಡಾದ ಅಹಾರೋತ್ಪನ್ನಗಳ ತಜ್ಞರ ಸಹಭಾಗಿತ್ವದಲ್ಲಿ ಹೆಚ್ಚುತ್ತಿರುವ ನಷ್ಟವನ್ನು ಕಡಿಮೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ. ಉಭಯ ದೇಶಗಳ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ 262 ಮಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ವ್ಯಾಪಾರವನ್ನು ವೃದ್ಧಿಸುವ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಮೂಲಸೌಕರ್ಯ ಕ್ಷೇತ್ರಗಳಲ್ಲಿ ಮುಂಬರುವ ಐದು ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ವಹಿವಾಟನ್ನು 480 ಬಿಲಿಯನ್ ಡಾಲರ್ ಹೂಡಿಕೆ ಮಾಡುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವ ಕಮಲ್‌ನಾಥ್ ತಿಳಿಸಿದ್ದಾರೆ. |