ಇನ್ನು ಕೇವಲ ಒಂದು ತಿಂಗಳೊಳಗೆ ವಿಮಾನಯಾನ ಮಾಡುವವರಿಗೆ ಇಲ್ಲೊಂದು ಶುಭಸುದ್ದಿ. ಅಂತಾರಾಷ್ಟ್ರೀಯ ವಿಮಾನಯಾನ ಸೇವೆ ಒದಗಿಸುವ ಕೆಲವು ಏರ್‌ಲೈನ್ಸ್‌ಗಳು ತಮ್ಮ ಪ್ರಯಾಣದರದಲ್ಲಿ ರಿಯಾಯಿತಿ ತೋರಿವೆ.ದೇಶದ ಅತಿದೊಡ್ಡ ಏರ್‌ಲೈನ್ಸ್ ಎಂಬ ಹೆಗ್ಗಳಿಕೆಗೆ ಪಾತ್ರವಾದ ಜೆಟ್ ಏರ್‌ವೇಸ್ ತನ್ನ ಅಂತಾರಾಷ್ಟ್ರೀಯ ಪ್ರಯಾಣ ದರವನ್ನು ಶೇ.30ರವರೆಗೆ ಕಡಿತಗೊಳಿಸಿರುವ ಜತೆಗೆ, ಸಿಂಗಾಪುರ ಹಾಗೂ ಹಾಂಕಾಂಗ್ ಮಾರ್ಗಗಳಿಗೆ ವಿಶೇಷ ಪ್ರಯಾಣ ದರ ನಿಗದಿ ಮಾಡಿದೆ. ಇದು ಕೇವಲ ಫೆಬ್ರವರಿ ಅಂತ್ಯದವರೆಗೆ ಮಾತ್ರ ಲಭ್ಯವಿರಲಿದ್ದು, ಶೇ.30ರ ರಿಯಾಯಿತಿಯಲ್ಲಿ ಪ್ರಮುಖ ದರಗಳು ಹಾಗೂ ಎಕಾನಮಿ ದರ್ಜೆಯನ್ನು ಮಾತ್ರ ಒಳಗೊಳ್ಳಲಿದೆ.ವಿದೇಶೀ ಏರ್‌ಲೈನ್‌ಗಳೂ ಈ ಬಾರಿ ಆಕರ್ಷಕ ಆಫರ್‌ಗಳನ್ನು ಹೊತ್ತು ತಂದಿವೆ. ಬ್ರಿಟಿಷ್ ಏರ್‌ವೇಸ್ ಪ್ರಯಾಣ ದರದಲ್ಲಿ ಶೇ.50ರಷ್ಟು ಕಡಿತಗೊಂಡಿದೆ. ಈ ಕಡಿತದಿಂದಾಗಿ ಲಂಡನ್‌ಗೆ ಮುಂಬೈ ಹಾಗೂ ದೆಹಲಿಯಿಂದ ಕೇವಲ 9,900 (ತೆರಿಗೆ ಒಳಗೊಂಡು) ರೂಪಾಯಿಗಳಿಗೆ ಪ್ರಯಾಣಿಸಬಹುದು. ಈ ಆಫರ್ ಕೇವಲ ಮಾರ್ಚ್ 31ರವರೆಗೆ ಮಾತ್ರ ಎಕಾನಮಿ ದರ್ಜೆಗೆ ಲಭ್ಯ. ಇಲ್ಲವಾದಲ್ಲಿ ಲಂಡನ್‌ಗೆ 20,044 ರುಪಾಯಿಗಳ ಪ್ರಯಾಣದರವಿದೆ. ಬ್ರಿಟಿಷ್ ಏರ್‌ವೇಸ್ ಲಂಡನ್‌ನ ಹೀಥ್ರೋ ಏರ್‌ರ್ಪೋರ್ಟ್‌ನಿಂದ ಪ್ರತಿ ವಾರ 48 ವಿಮಾನಗಳ ಸೇವೆಯನ್ನು ಭಾರತದ ಆರು ನಗರಗಳಿಗೆ ನೀಡುತ್ತದೆ. ಬ್ರಿಟಿಷ್ ಏರ್‌ವೇಸ್‌ನ ದಕ್ಷಿಣ ಏಷ್ಯಾದ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಅಮಂಡಾ ಅಮೋಸ್ ಪ್ರಕಾರ, ಬ್ರಿಟಿಷ್ ಏರ್‌ವೇಸ್ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅವರ ಬೇಡಿಕೆಗೆ ಅನುಗುಣವಾಗಿ ಇದನ್ನು ವಿಸ್ತರಿಸಲಿದೆ.ಕೇವಲ ಇಷ್ಟೇ ಅಲ್ಲ. ಜೆಟ್ ಏರ್‌ವೇಸ್ ಮುಂಬಯಿ- ಲಂಡನ್, ದೆಹಲಿ- ಲಂಡನ್‌ಗೆ ತನ್ನ ಪ್ರಥಮ ದರ್ಜೆ ಪ್ರಯಾಣದರವನ್ನು 2,72,000 ರೂಪಾಯಿಗಳಿಂದ 2 ಲಕ್ಷಕ್ಕೆ ಇಳಿಸಿದೆ. ಈ ಸೇವೆ ಪ್ರತಿದಿನ ಲಭ್ಯವಿದ್ದು, ಸಿಂಗಾಪುರ ಹಾಗೂ ಹಾಂಕಾಂಗ್‌ಗಳಿಗೆ ನೇರ ವಿಮಾನ ಸೇವೆಯನ್ನೂ ಒದಗಿಸುತ್ತದೆ. ಜೆಟ್ ಏರ್‌ವೇಸ್ ಪ್ರಸ್ತುತ 370 ವಿಮಾನಗಳನ್ನು ಹೊಂದಿದ್ದು, ಈ ಸೇವೆಯನ್ನು ಪ್ರತಿದಿನ ಒದಗಿಸುತ್ತದೆ. ಜತೆಗೆ, ಶ್ರೀಮಂತ ಸಿಂಗಾಪುರ ಏರ್‌ಲೈನ್ಸ್ ಆಗ್ನೇಯ ರಾಷ್ಟ್ರಗಳಿಗೆ ಶೇ.60ರವರೆಗೆ ಪ್ರಯಾಣದರದಲ್ಲಿ ರಿಯಾಯಿತಿ ತೋರಿದೆ. ಸಿಂಗಾಪುರ ಏರ್‌ಲೈನ್ಸ್‌ನ ಭಾರತ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಿ.ಡಬ್ಲ್ಯು.ಫೂ ಹೇಳುವಂತೆ, ಈ ರಿಯಾಯಿತಿ ಕೊಡುಗೆಗಳನ್ನು ಎಲ್ಲ ಮಾರ್ಗಗಳಿಗೆ ನೀಡುವುದು ಕಷ್ಟ. ಆದರೆ ಕೆಲವು ಮಾರ್ಗಗಳಲ್ಲಿ ಈ ಸೇವೆಯನ್ನು ಯಾವುದೇ ತೊಂದರೆಯಿಲ್ಲದೆ ಇನ್ನೂ ಕೆಲವು ದಿನಗಳಿಗೆ ವಿಸ್ತರಿಸಬಹುದು ಎನ್ನುತ್ತಾರೆ.ಅಂತಾರಾಷ್ಟ್ರೀಯ ಸೇವೆಗಳನ್ನು ಒದಗಿಸುವ ಹಲವು ಏರ್‌ಲೈನ್ಸ್‌ಗಳು ಈಗ ಉತ್ತಮ ಆದಾಯ ಪಡೆಯುತ್ತಿವೆ. ಕಳೆದ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಜೆಟ್ ಏರ್‌ವೇಸ್‌ನ ಅಂತಾರಾಷ್ಟ್ರೀಯ ಸೇವೆ ದೇಶೀಯ ಸೇವೆಗಿಂತ ಶೇ.100ರಷ್ಟು ಹೆಚ್ಚು ಆದಾಯ ಗಳಿಸಿದೆ ಎಂಬುದು ಆರ್ಥಿಕ ತಜ್ಞರ ಲೆಕ್ಕಾಚಾರ. ದಿ ಇಂಟರ್‌ನ್ಯಾಷನಲ್ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (ಐಎಟಿಎ) ಅಂದಾಜಿನ ಪ್ರಕಾರ, 2008ಕ್ಕಿಂತ ಈ ವರ್ಷದಲ್ಲಿ ವೈಮಾನಿಕ ಆದಾಯ ಹಾಗೂ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆ ಕಾಣಲಿದೆ. |