ಮುಂಬರುವ ಆರ್ಥಿಕ ವರ್ಷದ ಸಾಲಿನಲ್ಲಿ ನಡೆಯಲಿರುವ 3ಜಿ ಸ್ಪೆಕ್ಟ್ರಂ ಹರಾಜಿನಲ್ಲಿ ಸುಮಾರು 20 ಸಾವಿರ ಕೋಟಿ ರೂಪಾಯಿಗಳ ಆದಾಯ ದೊರೆಯುವ ನಿರೀಕ್ಷೆಯಿದೆ ಎಂದು ಕೇಂದ್ರ ಸರಕಾರದ ಮೂಲಗಳು ತಿಳಿಸಿವೆ. ಪ್ರಸಕ್ತ ಆರ್ಥಿಕ ವರ್ಷದ ಸಾಲಿನಲ್ಲಿ ಹರಾಜು ನಡೆಯುವ ಸಾಧ್ಯತೆಗಳಿದ್ದರಿಂದ ಸುಮಾರು 30 ಸಾವಿರ ಕೋಟಿ ರೂಪಾಯಿ ಆದಾಯ ದೊರೆಯುವ ನಿರೀಕ್ಷೆಯಿತ್ತು. ಆದರೆ ಹರಾಜು ಪ್ರಕ್ರಿಯೆಗೆ ವಿಳಂಬವಾಗಿದ್ದರಿಂದ ದರ ಇಳಿಕೆಯಾಗಿ 20 ಸಾವಿರ ಕೋಟಿ ರೂಪಾಯಿ ಆದಾಯವಾಗುವ ಸಾಧ್ಯತೆಗಳಿವೆ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಅಶೋಕ್ ಚಾವ್ಲಾ ತಿಳಿಸಿದ್ದಾರೆ. 3 ಜಿ ಸ್ಪೆಕ್ಟ್ರಂ ಹರಾಜು ಕೆಲ ಅನಿವಾರ್ಯ ಕಾರಣಗಳಿಂದಾಗಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ನಡೆಯುವ ಸಾಧ್ಯತೆಗಳಿಲ್ಲ. ಸಚಿವರುಗಳ ಸಮಿತಿ ಕೆಲ ವಿಷಯಗಳ ಕುರಿತಂತೆ ಚರ್ಚಿಸಲಿದ್ದಾರೆ ಎಂದು ಚಾವ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ. |