ಪ್ರತಿಯೊಬ್ಬ ಭಾರತೀಯನ ಮೇಲಿರುವ ಸಾಲದ ಋಣ ಇನ್ನು ಒಂದು ವರ್ಷದಲ್ಲಿ 30 ಸಾವಿರ ರೂಪಾಯಿಗಳಿಗೆ ಏರುವ ಅಂದಾಜು ಮಾಡಲಾಗಿದೆ! ಇದು ಜಾಗತಿಕ ಆರ್ಥಿಕ ಕುಸಿತದ ಪರಿಣಾಮ.
ಇತ್ತೀಚೆಗೆ, ಸೆಂಟ್ರಲ್ ಸ್ಟಾಟಿಸ್ಟಿಕಲ್ ಆರ್ಗನೈಸೇಶನ್ 115 ಕೋಟಿ ಭಾರತೀಯರಲ್ಲಿ ಪ್ರತಿಯೊಬ್ಬ ಭಾರತೀಯನ ವಾರ್ಷಿಕ ಆದಾಯ 38 ಸಾವಿರ ರೂಪಾಯಿಗಳೆಂದು ಅಂದಾಜು ಮಾಡಿತ್ತು. ಇದನ್ನು ಪರಿಗಣಿಸಿದರೆ, ದೇಶದ ಅರ್ಥ ವ್ಯವಸ್ಥೆಗೆ ಪುನಶ್ಚೇತನ ನೀಡುವ ಸರಕಾರದ ಕ್ರಮದ ಪರಿಣಾಮವಾಗಿ ಪ್ರತಿಯೊಬ್ಬನ 10 ತಿಂಗಳ ಆದಾಯ ಆತನ ತಲೆ ಮೇಲೆ ಸಾಲ ಇದ್ದಂತೆ.
ಪ್ರತಿ ವರ್ಷವೂ ಸರ್ಕಾರ ನಾಗರಿಕರ ಮೇಲೆ 3 ಲಕ್ಷ ಕೋಟಿ ರೂಪಾಯಿಗಳಷ್ಟು ಹೆಚ್ಚು ಸಾಲವನ್ನು ಹೊರಿಸುತ್ತಿದ್ದು, ಇದು 2010ರಲ್ಲಿ 34,06,322 ಕೋಟಿ ರೂಪಾಯಿಗಳಿಗೆ ಏರುವುದೆಂದು ಅಂದಾಜಿಸಲಾಗಿದೆ. ಅಂದರೆ ಏಳು ವರ್ಷದ ಹಿಂದಿದ್ದ ಪ್ರಮಾಣದ ದುಪ್ಪಟ್ಟು.
ಜಾಗತಿಕ ಆರ್ಥಿಕ ಕುಸಿತದ ಫಲ ಇದಾಗಿದ್ದು, ಇದರಿಂದ ಹೊರಬರಲು ಸರ್ಕಾರ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಬಜೆಟ್ ಪ್ರಕಾರ, ಸರ್ಕಾರ ಈಗಾಗಲೇ ತಾನು ಹಾಕಿದ ಒಂದು ಲಕ್ಷ ಕೋಟಿ ರೂಪಾಯಿಗಳ ಸಾಲ ಸಂಗ್ರಹ ಗುರಿಯನ್ನೂ ದಾಟಿ 2.62 ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿದೆ. ಅಂದರೆ, ಇದು ಅಂದಾಜಿಗಿಂತ ಎರಡುವರೆ ಪಟ್ಟು ಹೆಚ್ಚು.
ಆರ್ಥಿಕ ಪುನಶ್ಚೇತನ ಪ್ಯಾಕೇಜ್‌ನಲ್ಲಿ ಸುಂಕ ಇಳಿಕೆಯ ಮೂಲಕ, ಆದಾಯ ಕಡಿಮೆ ಮತ್ತು ವೆಚ್ಚ ಹೆಚ್ಚಾದ ಪರಿಣಾಮವಾಗಿ ಖರೀದಿ ಸಾಲದ ಪ್ರಮಾಣವೂ ಹೆಚ್ಚಾಗುತ್ತಿದೆ. ಮುಂದಿನ ಹಣಕಾಸು ವರ್ಷದಲ್ಲಿ ಸುಮಾರು ಮೂರು ಲಕ್ಷ ಕೋಟಿ ರೂಪಾಯಿಗಳ ಹಣ ಸಂಗ್ರಹ ಗುರಿಯನ್ನು ಹೊಂದಿದ್ದು, ಜುಲೈ ತಿಂಗಳ ಬಜೆಟ್ ಸಮಯದಲ್ಲಿ ಪರಿಸ್ಥಿತಿ ಸುಧಾರಿಸಬಹುದೆಂದು ಅಂದಾಜಿಸಲಾಗಿದೆ. |