ಸತ್ಯಂ ಕಂಪ್ಯೂಟರ್ ಸಂಸ್ಥೆಗೆ ವಂಚನೆ ಎಸಗಿದ ಸಂಸ್ಥಾಪಕ ರಾಮಲಿಂಗಾರಾಜು ಹಾಗೂ ಸಹೋದರ ಬಿ.ರಾಮಾರಾಜು ಮತ್ತು ಮಾಜಿ ಸಿಎಫ್ಒ ವಡ್ಲಾಮನಿ ಶ್ರೀನಿವಾಸ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಸತ್ಯಂಗೆ 7 ಸಾವಿರ ಕೋಟಿ ರೂಪಾಯಿ ವಂಚಿಸಿದ ರಾಮಲಿಂಗಾರಾಜು ಅವರನ್ನು ಆದಾಯ ತೆರಿಗೆ ಅಧಿಕಾರಿಗಳು ಫೆಬ್ರವರಿ 21 ರಂದು ತನಿಖೆಗೊಳಪಡಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಸತ್ಯಂ ಕಂಪ್ಯೂಟರ್ಸ್‌ನ 2007-08ರ ಸಾಲಿನ ಆದಾಯ ತೆರಿಗೆ ವಿವರಗಳು ಉಪ ಆಯುಕ್ತರ ಕಚೇರಿಯಲ್ಲಿ ನೆನೆಗುದಿಗೆ ಬಿದ್ದಿದ್ದು, ಆದಾಯ ತೆರಿಗೆಯನ್ನು ಅಂತಿಮಗೊಳಿಸುವ ಸಂದರ್ಭದಲ್ಲಿ ರಾಜು ಸಾರ್ವಜನಿಕವಾಗಿ ಕಂಪೆನಿಗೆ ವಂಚಿಸಿರುವುದಾಗಿ ಹೇಳಿಕೆ ನೀಡಿ ರಾಜೀನಾಮೆ ಸಲ್ಲಿಸಿದ್ದರು. ಆದಾಯ ತೆರಿಗೆ ಅಧಿಕಾರಿಗಳು, ನ್ಯಾಯಾಲಯಕ್ಕೆ ಸೆಕ್ಷನ್ 131ರ ಆದಾಯ ತೆರಿಗೆ ಕಾಯ್ದೆ ಪ್ರಕಾರ ಉಪಆಯುಕ್ತರಿಗೆ ರಾಜು ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ಅರ್ಜಿಯನ್ನು ಸಲ್ಲಿಸಿತ್ತು. ಈಗಾಗಲೇ ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ ರಾಜು ,ಸಹೋದರ ರಾಮಾರಾಜು ಅವರನ್ನು ಫೆಬ್ರವರಿ 4 ರಿಂದ ಮೂರು ದಿನಗಳ ಕಾಲ ಚಂಚಲ್‌ಗುಡಾ ಜೈಲಿನಲ್ಲಿ ವಿಚಾರಣೆ ನಡೆಸಿತ್ತು. |