ಸತ್ಯಂ ಸಂಸ್ಥಾಪಕ ಬಿ. ರಾಮಲಿಂಗಾರಾಜು ಎಸಗಿದ 7800 ಕೋಟಿ ರೂಪಾಯಿ ಹಗರಣದ ತನಿಖೆಗೆ ಸರಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿದೆ ಎನ್ನುವ ಆರೋಪಗಳನ್ನು ತಳ್ಳಿಹಾಕಿದ ಕೇಂದ್ರ ವಾಣಿಜ್ಯ ಖಾತೆ ಸಚಿವ ಕಮಲ್‌ನಾಥ್ ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಹೇಳಿದ್ದಾರೆ. ಯುಪಿಎ ಸರಕಾರ ಸತ್ಯಂ ತನಿಖೆಯಲ್ಲಿ ವಿಳಂಬ ನೀತಿಯನ್ನು ಅನುಸರಿಸದೆ ವೇಗದಲ್ಲಿ ತನಿಖೆ ನಡೆಸುತ್ತಿದೆ ಎಂದು ಭಾರತ ಮತ್ತು ನ್ಯೂಜಿಲ್ಯಾಂಡ್ ದ್ವಿಪಕ್ಷೀಯ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದ್ದಾರೆ. ಸತ್ಯಂ ಹಗರಣದ ತನಿಖೆಯನ್ನು ವಿಳಂಬ ನೀತಿ ಅನುಸರಿಸಿ ಸರಕಾರ ಹೊಣೆಯಿಂದ ತಪ್ಪಿಸಿಕೊಳ್ಳಬಯಸುತ್ತದೆಯೇ ಎನ್ನುವ ಕುರಿತು ಸುದ್ದಿಗಾರರು ಗಮನ ಸೆಳೆದಾಗ, ಸರಕಾರ ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ನಾನು ಭಾವಿಸಿಲ್ಲ ಎಂದು ಹೇಳಿದ್ದಾರೆ. ಸತ್ಯಂ ಹಗರಣ ತನಿಖೆಯನ್ನು ಚುರುಕುಗೊಳಿಸಿದ್ದೇವೆ. ಸೂಕ್ತ ಸಮಯದಲ್ಲಿ ತನಿಖೆಗೆ ಆದೇಶಿಸಲಾಗಿದೆ. ತನಿಖೆ ಪೂರ್ಣಗೊಳಿಸಲು ಸಮಯದ ಅಗತ್ಯವಿದೆ ಎಂದು ಸಚಿವ ಕಮಲ್‌ನಾಥ್ ಸುದ್ದಿಗಾರರಿಗೆ ತಿಳಿಸಿದ್ದಾರೆ. |