ಜಾಗತಿಕ ಆರ್ಥಿಕ ಕುಸಿತದಿಂದಾಗಿ, ವಾರ್ಷಿಕವಾಗಿ ಶೇ.20 ರಷ್ಟು ಅಭಿವೃದ್ಧಿಯತ್ತ ಸಾಗುತ್ತಿರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿಲ್ಲ ಎಂದು ಕೇಂದ್ರ ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದ ಆರಂಭಿಕ ಆರು ತಿಂಗಳಲ್ಲಿ (ಏಪ್ರಿಲ್-ಸೆಪ್ಟೆಂಬರ್ 2008) ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನೇರ ವಿದೇಶಿ ಬಂಡವಾಳ ಹೂಡಿಕೆಯ ಒಳಹರಿವು ಈಗಾಗಲೇ 1.4 ಬಿಲಿಯನ್ ಡಾಲರ್ ತಲುಪಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ತಲುಪಿದ ಮೊತ್ತಕ್ಕೆ ಸಮವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದ ದೇಶದ ಮೇಲಾದ ಆರ್ಥಿಕ ಕುಸಿತದ ಮಧ್ಯೆಯು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಸದೃಢ ಸ್ಥಿತಿಯಲ್ಲಿದ್ದು, ವಾರ್ಷಿಕವಾಗಿ ಶೇ.20 ರಷ್ಟು ಅಭಿವೃದ್ಧಿ ಹೊಂದುತ್ತಿರುವುದರಿಂದ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.
2003-04ರಲ್ಲಿ 12.9 ಬಿಲಿಯನ್ ಡಾಲರ್‌ಗಳಷ್ಟಿದ್ದ ಮಾಹಿತಿ ತಂತ್ರಜ್ಞಾನ ರಫ್ತು ವಹಿವಾಟು 2007-08ರಲ್ಲಿ 40.4 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ.
ಪ್ರಸ್ತುತ 2008-09 ರ ಸಾಲಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗವಕಾಶಗಳು 20 ಲಕ್ಷ ದಿಂದ 22.3 ಲಕ್ಷದವರೆಗೆ ಏರಿಕೆಯನ್ನು ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. |