ಸತ್ಯಂ ಕಂಪ್ಯೂಟರ್ ಸರ್ವಿಸಸ್ ಸಂಸ್ಥೆಗೆ 7800 ಕೋಟಿ ರೂ. ವಂಚಿಸಿದ ಪ್ರಕರಣ ಕುರಿತಂತೆ ಬಿ.ರಾಮಲಿಂಗಾರಾಜು ಅವರನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಚಂಚಲ್‌ಗುಡಾ ಕಾರಾಗ್ರಹದಲ್ಲಿ ವಿಚಾರಣೆ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದಾಯ ತೆರಿಗೆ ಇಲಾಖೆಯ ತಂಡ ಇಂದು ಬೆಳಿಗ್ಗೆ ಕಾರಾಗ್ರಹಕ್ಕೆ ಆಗಮಿಸಿ ಆರೋಪಿ ರಾಜು ವಿಚಾರಣೆಯನ್ನು ಆರಂಭಿಸಿದ್ದಾರೆ ಎಂದು ಕಾರಾಗ್ರಹದ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಆದಾಯ ತೆರಿಗೆಯ ನಾಲ್ಕು ಮಂದಿ ಅಧಿಕಾರಿಗಳ ತಂಡ, ಹಣಕಾಸಿನ ವರ್ಗಾವಣೆ ಮತ್ತು ವರ್ಗಾವಣೆಯಾದ ಹಣದಹೂಡಿಕೆ ಮತ್ತಿತರ ವಿಷಯಗಳ ಕುರಿತಂತೆ ಪ್ರಶ್ನಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜನೆವರಿ 7 ರಂದು ಸತ್ಯಂ ಸಂಸ್ಥಾಪಕ ರಾಜು ಸಂಸ್ಥೆಗೆ 7800 ಕೋಟಿ ರೂಪಾಯಿ ವಂಚಿಸಿರುವುದಾಗಿ ಒಪ್ಪಿಕೊಂಡು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿದಾಗ ಕಾರ್ಪೋರೇಟ್ ವಲಯ ಬೆಚ್ಚಿಬಿದ್ದು ದೇಶದ ಅತ್ಯಂತ ದೊಡ್ಡ ಹಗರಣ ಎನ್ನುವ ಖ್ಯಾತಿಗೆ ಒಳಗಾಗಿತ್ತು.
ಅಪೆಕ್ಸ್ ನ್ಯಾಯಾಲಯದ ಅನುಮತಿಯ ಮೇರೆಗೆ ಶೇರುಪೇಟೆ ನಿಯಂತ್ರಕ ಸಂಸ್ಥೆ ಸೆಬಿ, ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾರಾಜು ಸಹೋದರ ರಾಮಾರಾಜು ಅವರನ್ನು ಫೆಬ್ರವರಿ 4 ರಿಂದ ಮೂರು ದಿನಗಳ ಕಾಲ ವಿಚಾರಣೆ ನಡೆಸಿ ಮಾಹಿತಿಯನ್ನು ಸಂಗ್ರಹಿಸಿತ್ತು. |