ಭಯೋತ್ಪಾದನಾ ದಾಳಿ ಹಾಗೂ ಜಾಗತಿಕ ಆರ್ಥಿಕ ಕುಸಿತದಿಂದಾಗಿ ಕಳೆದ ಅಕ್ಟೋಬರ್ ತಿಂಗಳಿನಿಂದ ವಿದೇಶಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಖಾತೆ ಸಚಿವೆ ಅಂಬಿಕಾ ಸೋನಿ ಹೇಳಿದ್ದಾರೆ.
ರಾಜ್ಯಸಭೆಯ ಪ್ರಶ್ನೋತರ ಕಲಾಪದಲ್ಲಿ ಭಾಗವಹಿಸಿದ ಪ್ರವಾಸೋದ್ಯಮ ಸಚಿವೆ ಅಂಬಿಕಾ ಸೋನಿ,ಕಳೆದ 2007ರಲ್ಲಿ 5.08 ಮಿಲಿಯನ್ ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಶೇ.14.56 ರಷ್ಟು ಏರಿಕೆಯಾಗಿತ್ತು ಎಂದು ಹೇಳಿದ್ದಾರೆ.
ಜಾಗತಿಕ ಆರ್ಥಿಕ ಕುಸಿತ ಹಾಗೂ ಭಯೋತ್ಪಾದಕರ ದಾಳಿಯ ಹಿನ್ನೆಲೆಯಲ್ಲಿ ಕಳೆದ ವರ್ಷದ ಅಕ್ಟೋಬರ್ ತಿಂಗಳಿನ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.ಡಿಸೆಂಬರ್ ತಿಂಗಳಲ್ಲಿ 521,990 ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ಶೇ.12.5 ರಷ್ಟು ಕುಸಿತವಾಗಿದೆ. ಜನೆವರಿ ತಿಂಗಳಲ್ಲಿ 487.262 ವಿದೇಶಿ ಪ್ರವಾಸಿಗರು ಭಾರತಕ್ಕೆ ಭೇಟಿ ನೀಡಿದ್ದು, ಶೇ.17.6 ರಷ್ಟು ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.
ಕೇಂದ್ರ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಕೇಂದ್ರಗಳ ಮೂಲಸೌಕರ್ಯ ಯೋಜನೆಯಡಿ ರಾಜ್ಯಗಳಿಗೆ ಗ್ರಾಮೀಣಭಾಗದಲ್ಲಿರುವ ಪ್ರವಾಸಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಆರ್ಥಿಕ ಸಹಾಯವನ್ನು ನೀಡುತ್ತಿದೆ ಎಂದು ಸಚಿವೆ ಅಂಬಿಕಾ ಸೋನಿ ತಿಳಿಸಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯ ಪ್ರತಿಯೊಂದು ಗ್ರಾಮೀಣಭಾಗದಲ್ಲಿರುವ ಪ್ರವಾಸಿ ಕೇಂದ್ರಗಳಿಗೆ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ 50 ಲಕ್ಷ ರೂಪಾಯಿ ಹಾಗೂ ಅಗತ್ಯತೆಗಳನ್ನು ಪೂರೈಸಲು 20 ಲಕ್ಷ ರೂಪಾಯಿ ಬಿಡುಗಡೆ ಮಾಡುತ್ತಿದೆ ಎಂದು ಸಚಿವ ಅಂಬಿಕಾ ಸೋನಿ ರಾಜ್ಯಸಭೆಗೆ ತಿಳಿಸಿದ್ದಾರೆ. |