ಜಾಗತಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ಕೈಗಾರಿಕೋದ್ಯಮಕ್ಕೆ ಪುನಶ್ಚೇತನ ನೀಡಲು ಸರಕಾರ ಶೇ.2ರಷ್ಟು ಸೇವಾ ತೆರಿಗೆ ಹಾಗೂ ಅಬಕಾರಿ ತೆರಿಗೆಯನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ ಎಂದು ಕೇಂದ್ರ ವಿತ್ತ ಖಾತೆ ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ. ಕೇಂದ್ರ ಅಬಕಾರಿ ತೆರಿಗೆಯನ್ನು ಶೇ.10 ರಿಂದ ಶೇ.8ಕ್ಕೆ ಇಳಿಸಲಾಗಿದ್ದು, ಸೇವಾ ತೆರಿಗೆಯನ್ನು ಶೇ.12 ರಿಂದ ಶೇ.10 ರಷ್ಟು ಕಡಿತಗೊಳಿಸಿದೆ ಎಂದು ತಿಳಿಸಿದ್ದಾರೆ. ಡಿಸೆಂಬರ್‌ನಲ್ಲಿ ಕೇಂದ್ರ ಸರಕಾರ ಘೋಷಿಸಿದ ಮೊದಲ ಉತ್ತೇಜನ ಪ್ಯಾಕೇಜ್‌ನಲ್ಲಿ ಶೇ.4 ರಷ್ಟು ಅಬಕಾರಿ ತೆರಿಗೆ ಕಡಿತಗೊಳಿಸಲಾಗಿದ್ದು,ಮಾರ್ಚ್ 31ರ ನಂತರವೂ ಮುಂದುವರಿಯಲಿದೆ ಎಂದು ವಿತ್ತ ಖಾತೆ ಸಚಿವ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮೇಲಿನ ಚರ್ಚೆಯಲ್ಲಿ ತಿಳಿಸಿದರು. ಸಚಿವ ಮುಖರ್ಜಿಯವರು ಮುಂದುವರಿದು ಮಾತನಾಡಿ, ಸಿಮೆಂಟ್ ಮೇಲಿನ ತೆರಿಗೆಯನ್ನು ಕೂಡಾ ಶೇ.10 ರಿಂದ ಶೇ.8ಕ್ಕೆ ಇಳಿಸಲಾಗಿದೆ ಎಂದು ಹೇಳಿದ್ದಾರೆ. ಜಾಗತಿಕ ಆರ್ಥಿಕ ಕುಸಿತದಿಂದಾಗಿ ದೇಶದ ಆರ್ಥಿಕತೆಯ ವೇಗದಲ್ಲಿ ನಿಧಾನಗತಿಯಿದ್ದರೂ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುವ ವಿಶ್ವಾಸವಿದೆ ಎಂದು ನುಡಿದರು. 2008-09 ರ ಮಧ್ಯಂತರ ಬಜೆಟ್ ಕುರಿತಂತೆ ನಡೆದ ಚರ್ಚೆಯಲ್ಲಿ ಸಚಿವ ಮುಖರ್ಜಿ ನಾವು ಖಂಡಿತವಾಗಿ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲಿದ್ದೇವೆ. ಆರ್ಥಿಕ ಬಿಕ್ಕಟ್ಟನ್ನು ಎದುರಿಸಲು ಬ್ಯಾಂಕ್‌ಗಳಿಗೆ ಹೆಚ್ಚಿನ ನಗದು ಹಣ ಚಲಾವಣೆಗೆ ಅವಕಾಶ ನೀಡಲಾಗಿದೆ ಎಂದರು. ಎನ್‌ಡಿಎ ಸರಕಾರದ ಅವಧಿಯಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.5.8ಗಿಂತ ಏರಿಕೆಯಾಗಲು ಸಾಧ್ಯವಾಗಲಿಲ್ಲ.ಆದರೆ ಯುಪಿಎ ಸರಕಾರದ ಅಧಿಯಲ್ಲಿ ಗರಿಷ್ಟ ಶೇ.9 ರಷ್ಟು ಜಿಡಿಪಿ ದರ ಏರಿಕೆಯಾಗಲು ಸಾಧ್ಯವಾಯಿತು ಎಂದು ಸಚಿವ ಪ್ರಣಬ್ ಎನ್‌ಡಿಎ ಮೈತ್ರಿಕೂಟವನ್ನು ತರಾಟೆಗೆ ತೆಗೆದುಕೊಂಡರು |