ಸೂಕ್ತ ಸಮಯಕ್ಕೆ ಕೇಂದ್ರ ಸರಕಾರ ಪ್ಯಾಕೇಜ್‌ಗಳನ್ನು ಘೋಷಿಸಿದ್ದರಿಂದ ಬ್ಯಾಂಕ್‌ಗಳು ಸಾಲ ವಿತರಣೆಯನ್ನು ಆರಂಭಿಸಿದ್ದು,ಕೈಗಾರಿಕೋದ್ಯಮ ಚೇತರಿಸಿಕೊಳ್ಳುತ್ತಿರುವ ಅಂಶಗಳು ಕಂಡುಬಂದಿವೆ ಎಂದು ವಿತ್ತಸಚಿವ ಪ್ರಣಬ್ ಮುಖರ್ಜಿ ಹೇಳಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಮೊದಲ ಪ್ಯಾಕೇಜ್ ಬಿಡುಗಡೆಗೊಳಿಸಿದ್ದು, ಎರಡನೇ ಪ್ಯಾಕೇಜ್ ಜನೆವರಿ ತಿಂಗಳಲ್ಲಿ ಘೋಷಿಸಲಾಗಿದೆ. ಪ್ಯಾಕೇಜ್‌ಗಳ ಪರಿಣಾಮ ಬೀರಲು ಕೆಲ ಸಮಯದ ಅಗತ್ಯವಾಗಿದೆ. ಉಕ್ಕು ಸಿಮೆಂಟ್ ಕ್ಷೇತ್ರಗಳ ಉತ್ಪಾದನೆಯಲ್ಲಿ ಏರಿಕೆಯಾಗಿದ್ದು ಬೇಡಿಕೆಯಲ್ಲಿ ಕೂಡಾ ಹೆಚ್ಚಳವಾಗಿದೆ ಎಂದು ಸಚಿವ ಪ್ರಣಬ್ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಕುರಿತು ವಿವರಣೆ ನೀಡುತ್ತಿರುವಾಗ ತಿಳಿಸಿದ್ದಾರೆ.
ಉತ್ಪಾದನಾ ಕ್ಷೇತ್ರದ ಕಂಪೆನಿಗಳು ನವೆಂಬರ್ ತಿಂಗಳಿಗೆ ಹೋಲಿಸಿದಲ್ಲಿ ಡಿಸೆಂಬರ್ 2008 ಕ್ಕೆ ದಾಖಲಾದ ಅಂಕಿ ಅಂಶಗಳ ಪ್ರಕಾರ ಉತ್ಪಾದನೆಯಲ್ಲಿ ಏರಿಕೆ ಕಂಡಿದ್ದು, ಬ್ಯಾಂಕ್‌ಗಳು ಕೂಡಾ ಸಾಲ ನೀಡಲು ಆರಂಬಿಸಿವೆ ಎಂದು ಹೇಳಿದ್ದಾರೆ.
ಡಿಸೆಂಬರ್ -ಜನೆವರಿ ತಿಂಗಳಲ್ಲಿ ಸಿಮೆಂಟ್ ಉತ್ಪಾದನೆ ಶೇ.8 ರಷ್ಟು ಏರಿಕೆಯಾಗಿದ್ದು, ಉಕ್ಕು ಉತ್ಪಾದನೆ 22.8 ಮಿಲಿಯನ್ ಟನ್‌ಗೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳ ಸಮೇತ ವಿವರಿಸಿದ್ದಾರೆ.
ಅಗತ್ಯವಾದ ಗ್ರಾಹಕ ವಸ್ತುಗಳ ಉತ್ಪಾದನೆಯಲ್ಲಿ ಶೇ.25 ರಷ್ಟು ಏರಿಕೆ ಕಂಡಿವೆ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಲೋಕಸಭೆಗೆ ತಿಳಿಸಿದ್ದಾರೆ. |