ವಾಷಿಂಗ್ಟನ್ : ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಅವರ ಮೇಲೆ ರಿಪಬ್ಲಿಕನ್ ಪಕ್ಷದ ಮುಖಂಡರು ವಾಗ್ದಾಳಿ ಮುಂದುವರಿಸಿದ್ದು, ಪ್ಯಾಕೇಜ್ ಘೋಷಣೆ ಮತ್ತು ತೆರಿಗೆ ಹೆಚ್ಚಳ ನೀತಿಗಳು ಬೇಜವಾಬ್ದಾರಿತನದ ಪರಮಾವಧಿ ಎಂದು ರಿಪಬ್ಲಿಕನ್ ಪಕ್ಷದ ನಾಯಕರಾದ ಬಾಬ್ಬಿ ಜಿಂದಾಲ್ ಟೀಕಿಸಿದ್ದಾರೆ.
ಒಬಾಮಾ ರಾಷ್ಟ್ರದ ಜನತೆನ್ನು ಉದ್ದೇಶಿಸಿ ಮಾತನಾಡಿದ ನಂತರ ರಿಪಬ್ಲಿಕನ್ ಪಕ್ಷದ ಮುಖಂಡ ಜಿಂದಾಲ್ ಮಾತನಾಡಿ, ವೆಚ್ಚಕ್ಕಾಗಿ ಹೆಚ್ಚಿನ ಹಣವನ್ನು ಹರಿಸುತ್ತಿದ್ದಾರೆಯೇ ಹೊರತು ತೆರಿಗೆ ಕಡಿತ ಮಾಡಿ ಜನತೆಗೆ ಎದುರಾಗಿರುವ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿಲ್ಲ. ಆದರೂ ದೇಶದ ಅಭಿವೃದ್ಧಿಗಾಗಿ ಒಬಾಮಾ ಅವರೊಂದಿಗೆ ಕೈಜೋಡಿಸಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದಾರೆ.
ಆರ್ಥಿಕ ಕುಸಿತವನ್ನು ನಿಯಂತ್ರಿಸಲು ಕೇವಲ ತೆರಿಗೆ ಏರಿಕೆ ಮಾಡಿದರೇ ಸಾಲದು. ಬಲಿಷ್ಟ ಆರ್ಥಿಕತೆ ಹಾಗೂ ಸಂಪೂರ್ಣ ಅಧಿಕಾರವನ್ನು ವಾಷಿಂಗ್ಟನ್ ರಾಜಕಾರಣಿಗಳಿಗೆ ನೀಡುವುದು ಅಗತ್ಯವಾಗಿದೆ ಎಂದು ಜಿಂದಾಲ್ ಪ್ರತಿಪಾದಿಸಿದರು.
ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ 787 ಬಿಲಿಯನ್ ಡಾಲರ್ ಪ್ಯಾಕೇಜ್‌ನ್ನು ರಿಪಬ್ಲಿಕನ್ ಪಕ್ಷದ ಮೂವರು ಅಭ್ಯರ್ಥಿಗಳು ಮಾತ್ರ ಬೆಂಬಲಿಸಿದ್ದರು. ಕೆಲ ಡೆಮಾಕ್ರೆಟ್ ಹಾಗೂ ಸ್ವತಂತ್ರ ಅಭ್ಯರ್ಥಿಗಳು, ರಿಪಬ್ಲಿಕನ್ ಪಕ್ಷದ ಸದಸ್ಯರು ಅಮೆರಿಕದ ಜನತೆಯ ಸಂಕಷ್ಟದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. |