ಕೇಂದ್ರ ಸರಕಾರದ ಉದ್ಯೋಗಿಗಳಿಗೆ ಶೇ.6 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಳ ಮಾಡಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.
ಸಚಿವ ಸಂಪುಟದ ತುಟ್ಟಿಭತ್ಯೆ ಹೆಚ್ಚಳ ನಿರ್ಧಾರದಿಂದ ಕೇಂದ್ರ ಸರಕಾರದ ಉದ್ಯೋಗಿಗಳ ಮೂಲವೇತನದಲ್ಲಿ ಶೇ.16 ರಷ್ಟಿದ್ದ ತುಟ್ಟಿಭತ್ಯೆ ಶೇ22ಕ್ಕೆ ತಲುಪಿದೆ.
ಕೇಂದ್ರ ಸಚಿವ ಸಂಪುಟದ ನಿರ್ಧಾರವನ್ನು ಪ್ರಕಟಿಸಿದ ಗೃಹ ಸಚಿವ ಚಿದಂಬರಂ,ತುಟ್ಟಿಭತ್ಯೆ ಹೆಚ್ಚಳದಿಂದಾಗಿ ಕೇಂದ್ರ ಸರಕಾರಕ್ಕೆ ಸುಮಾರು 6 ಸಾವಿರ ಕೋಟಿ ರೂ.ಗಳ ಹೊರೆಯಾಗಲಿದೆ ಎಂದು ತಿಳಿಸಿದ್ದಾರೆ.
ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆಗಳು ನಡೆಯಲಿರುವುದರಿಂದ ಯುಪಿಎ ಸರಕಾರ ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
ಕೇಂದ್ರ ಸರಕಾರ ದೇಶಿಯ ಉತ್ಪನ್ನಗಳಿಗೆ ಬೇಡಿಕೆ ದೊರೆಯಲು ಅಬಕಾರಿ ತೆರಿಗೆ ಹಾಗೂ ಸೇವಾ ತೆರಿಗೆಯಲ್ಲಿ ಶೇ.2 ರಷ್ಟು ಕಡಿತಗೊಳಿಸಿ ಈಗಾಗಲೇ ಆದೇಶ ಹೊರಡಿಸಿದೆ. |