ಜಾಗತಿಕ ಹಣಕಾಸು ಬಿಕ್ಕಟ್ಟು ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರಿರುವುದು ಶುಕ್ರವಾರ ಸಾಬೀತಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿದ್ದ ಶೇ.8.9ರಷ್ಟಿದ್ದ ದೇಶದ ಆರ್ಥಿಕತೆ ಅಭಿವೃದ್ಧಿ ದರವು 2008-09 ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.5.3ಕ್ಕೆ ಕುಸಿದಿದೆ. ಇದು 2003ದಿಂದೀಚೆಗಿನ ಅತ್ಯಂತ ನಿಧಾನಗತಿಯ ವಿತ್ತೀಯ ಬೆಳವಣಿಗೆ. ಉತ್ಪಾದನಾ ಮತ್ತು ಕೃಷ್ಯುತ್ಪನ್ನ ಕ್ಷೇತ್ರದಲ್ಲಿನ ಹಿನ್ನಡೆಯೇ ಇದಕ್ಕೆ ಕಾರಣವಾಗಿದ್ದು, ಆದರೂ ಕೆಲವು ಸೇವಾ ವಲಯಗಳು ಉತ್ತಮ ಪ್ರಗತಿ ದಾಖಲಿಸಿವೆ.
ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ದೂರವೇ ಉಳಿದಿದೆ ಎಂದು ನಂಬಲಾಗಿದ್ದ ಕೃಷಿ ಕ್ಷೇತ್ರಕ್ಕೆ ಕೂಡ ವಿತ್ತೀಯ ವಿಳಂಬ ಗತಿಯ ಬಾಧೆ ತಟ್ಟಿದ್ದು, ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ.2.2ರಷ್ಟು ಹಿನ್ನಡೆ ದಾಖಲಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕೃಷಿ ವಲಯದ ಪ್ರಗತಿ ದರವು ಶೇ.6.9 ಇತ್ತು ಎಂಬುದು ಇಲ್ಲಿ ಗಮನಾರ್ಹ.
ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ.5 ಇದ್ದ ಉತ್ಪಾದನೆ ಕ್ಷೇತ್ರದ ಪ್ರಗತಿಯು ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಶೇ.0.2 ಕುಸಿತ ದಾಖಲಿಸಿದೆ. ಅದೇ ರೀತಿ ಕಟ್ಟಡ ನಿರ್ಮಾಣ ಕ್ಷೇತ್ರದ ಪ್ರಗತಿಯು ಕಳೆದ ತ್ರೈಮಾಸಿಕದಲ್ಲಿ ಶೇ.9.7 ಇದ್ದದ್ದು ಶೇ.6.7ಕ್ಕೆ ಕುಗ್ಗಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ಶೇ.10.7 ಬೆಳವಣಿಗೆ ಸಾಧಿಸಿದ್ದ ವಹಿವಾಟು, ಹೋಟೆಲ್, ಸಾರಿಗೆ ಮತ್ತು ಸಂವಹನ ಕ್ಷೇತ್ರವು ಈ ತ್ರೈಮಾಸಿಕದಲ್ಲಿ ಶೇ.6.8ರಷ್ಟು ಮಾತ್ರ ಪ್ರಗತಿ ದಾಖಲಿಸಿ ಕುಸಿದಿದೆ. ಅದೇ ರೀತಿ ಹಣಕಾಸು, ವಿಮೆ, ಸ್ಥಿರಾಸ್ಥಿ ಮತ್ತು ವ್ಯವಹಾರ ಸೇವೆಗಳ ಪ್ರಗತಿಯು ಶೇ.9.5ರಿಂದ ಶೇ.9.2ಕ್ಕೆ ಇಳಿದಿದೆ.
ಧನಾತ್ಮಕ ಪ್ರಗತಿ ದಾಖಲಿಸಿದ ವಿಭಾಗಳೆಂದರೆ ಸಮುದಾಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರ ಮಾತ್ರ. |