ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ಸ್ಥಿತಿ ಕಡಿಮೆ ಪ್ರಮಾಣದಲ್ಲಿ ಸುಧಾರಿಸುತ್ತಿದ್ದರೂ ಕೂಡ, ಭಾರತ ಯಾವುದೇ ಸ್ಥಿತಿಯನ್ನು ಎದುರಿಸಲು ಸಿದ್ದವಾಗಿದೆ ಎಂದು ಕೇಂದ್ರ ಸರಕಾರ ಶುಕ್ರವಾರ ತಿಳಿಸಿದೆ.
ಯಾವುದೇ ಆತಂತಕಕಾರಿ ಪರಿಸ್ಥಿತಿಯನ್ನು ಎದುರಿಸಲು ಸರಕಾರ ಹಾಗೂ ಆರ್‌ಬಿಐ ಸಮರ್ಥವಾಗಿದೆ ಎಂದು ರಾಜ್ಯ ವಿತ್ತ ಸಚಿವ ಪಿ.ಕೆ.ಬನ್ಸಾಲ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಕಳೆದ ವರ್ಷ ಶೇ.8.9ರಷ್ಟಿದ್ದ ದೇಶದ ಆರ್ಥಿಕತೆ ಅಭಿವೃದ್ಧಿ ದರವು 2008-09 ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇ.5.3ಕ್ಕೆ ಕುಸಿದಿದೆ. ಇದು 2003ದಿಂದೀಚೆಗಿನ ಅತ್ಯಂತ ನಿಧಾನಗತಿಯ ವಿತ್ತೀಯ ಬೆಳವಣಿಗೆ. ಉತ್ಪಾದನಾ ಮತ್ತು ಕೃಷಿ ಉತ್ಪನ್ನ ಕ್ಷೇತ್ರದಲ್ಲಿನ ಹಿನ್ನಡೆಯೇ ಇದಕ್ಕೆ ಕಾರಣವಾಗಿದ್ದು, ಆದರೂ ಕೆಲವು ಸೇವಾ ವಲಯಗಳು ಉತ್ತಮ ಪ್ರಗತಿ ದಾಖಲಿಸಿವೆ.
ಜಾಗತಿಕ ಹಣಕಾಸು ಬಿಕ್ಕಟ್ಟಿನಿಂದ ದೂರವೇ ಉಳಿದಿದೆ ಎಂದು ನಂಬಲಾಗಿದ್ದ ಕೃಷಿ ಕ್ಷೇತ್ರಕ್ಕೆ ಕೂಡ ವಿತ್ತೀಯ ವಿಳಂಬ ಗತಿಯ ಬಾಧೆ ತಟ್ಟಿದ್ದು, ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಶೇ.2.2ರಷ್ಟು ಹಿನ್ನಡೆ ದಾಖಲಿಸಿದೆ. ಆದರೆ ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿರುವ ಸಚಿವರು, ಯಾವುದೇ ಆರ್ಥಿಕ ಹಿಂಜರಿತವನ್ನು ಸಮರ್ಥವಾಗಿ ಎದುರಿಸಲು ಭಾರತ ಶಕ್ತವಾಗಿದೆ ಎಂದರು. |