ಲೋಕಸಭಾ ಚುನಾವಣೆಯ ಹೊಸ್ತಿಲಲ್ಲೇ ಬಿಜೆಪಿಯ ಪ್ರಧಾನಿ ಪ್ರತಿನಿಧಿ ಎಲ್.ಕೆ.ಅಡ್ವಾಣಿ, ಎನ್‌ಡಿಎ ಸರ್ಕಾರ ವಯಸ್ಸಾದ ರೈತರಿಗೂ ಪಿಂಚಣಿ ಸೌಲಭ್ಯ ನೀಡುವುದಾಗಿ ಘೋಷಿಸಿದ್ದಾರೆ.
ಎನ್‌ಡಿಎ ಅಧಿಕಾರಕ್ಕೆ ಬಂದಲ್ಲಿ ರೈತರಿಗೆಂದೇ ಒಂದು ಹೊಸ ಯೋಜನೆಯನ್ನು ಎನ್‌ಡಿಎ ಪ್ರಕಟಿಸಲಿದೆ. ಅದರಲ್ಲಿ ಹಿರಿಯ ರೈತರ ಪಿಂಚಣಿಯೂ ಒಳಗೊಳ್ಳಲಿದ್ದು, ಸಣ್ಣ ರೈತನೂ ಹತಾಶನಾಗದೆ, ನೆಮ್ಮದಿಯ ಜೀವನ ನಡೆಸಲು ಈ ಯೋಜನೆಯಲ್ಲಿ ಹಲವು ಸೇವಾ ಸೌಲಭ್ಯಗಳು ಇರಲಿವೆ ಎಂದು ಅಡ್ವಾಣಿ ಭರವಸೆ ನೀಡಿದ್ದಾರೆ. ಮದನಪಳ್ಳಿಯಲ್ಲಿ ಬಿಜೆಪಿಯ ವಿಜಯ ಸಂಕಲ್ಪ ರ‌್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಡ್ವಾಣಿ ರೈತರಿಗೆ ಈ ಭರವಸೆ ನೀಡಿದರು.
ಸರ್ಕಾರಿ ನೌಕರರು ಪಿಂಚಣಿ ಪಡೆಯುವುದಾದಲ್ಲಿ ವಯಸ್ಸಾದ ರೈತ ಪಿಂಚಣಿಯನ್ನು ಏಕೆ ಪಡೆಯಬಾರದು ಎಂದು ಪ್ರಶ್ನಿಸಿದ ಅಡ್ವಾಣಿ, ಬಿಜೆಪಿ ಸಾಮಾನ್ಯ ಮನುಷ್ಯನಿಗೆ ರಕ್ಷಣೆ, ಉತ್ತಮ ಆಡಳಿತ ನೀಡುವುದರಲ್ಲಿ ಬದ್ಧವಿದೆ ಎಂದರು. ಕೇಂದ್ರದಲ್ಲಿ ಎನ್‌ಡಿಎ ಆಡಳಿತಕ್ಕೆ ಬಂದಲ್ಲಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಮಹತ್ವ ನೀಡಲಿದೆ. ಹೆದ್ದಾರಿಗಳ ಅಗಲೀಕರಣ, ಗ್ರಾಮೀಣ ಪ್ರದೇಶಕ್ಕೆ ರಸ್ತೆ ಸೌಕರ್ಯ, ನದೀ ಜೋಡಣೆಯಂತಹ ಕಾರ್ಯಗಳನ್ನು ಎನ್‌ಡಿಎ ಕೈಗೆತ್ತಿಕೊಳ್ಳಲಿದೆ ಎಂದರು.
ಜಾಗತಿಕ ಆರ್ಥಿಕ ಕುಸಿತದ ಪರಿಣಾಮ ಇಷ್ಟಕ್ಕೇ ಮುಗಿದಿಲ್ಲ. ಇನ್ನೂ ಮೂರ್ನಾಲ್ಕು ತಿಂಗಳಲ್ಲಿ ಸುಮಾರು ಒಂದುವರೆ ಕೋಟಿಯಷ್ಟು ಉದ್ಯೋಗ ನಷ್ಟ ಉಂಟಾಗಲಿದೆ. ಇದಕ್ಕೆಲ್ಲ ಸರ್ಕಾರ ಮಾರ್ಗ ಸೂಚಿಸುತ್ತದೆಯೇ? ಖಂಡಿತ ಸಾಧ್ಯವಿಲ್ಲ ಎಂದು ಯುಪಿಎ ಸರ್ಕಾರದ ವಿರುದ್ಧ ಅಡ್ವಾಣಿ ವಾಗ್ದಾಳಿ ನಡೆಸಿದರು. |